ಸಾರಾಂಶ
ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಸಮೀಪದ ವಡರಕಟ್ಟೆಯ ಬಳಿ ಶನಿವಾರ ಟಿಪ್ಪರ್ ಹಾಗೂ ಮಾರುತಿ ಶಿಫ್ಟ್ ಡಿಸೈರ್ ನಡುವೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ ಅಪಘಾತಕ್ಕೀಡಾದ  ಮಾರುತಿ ಶಿಫ್ಟ್ ಡಿಸೈರ್ ಕಾರು ಜಖಂಗೊಂಡಿರುವುದು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅತಿ ವೇಗದಿಂದ ಎದುರುಗಡೆಯಿಂದ ಬಂದ ಟಿಪ್ಪರ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ ದುರಂತ ಘಟನೆ ತಾಲೂಕಿನ ಚಿಕ್ಕಿಂದುವಾಡಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಮೃತರ ಪೈಕಿ ನಾಲ್ಕು ಮಂದಿ ಮೈಸೂರು ಎಂಐಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ತಾಲೂಕಿನ ಚಿಕ್ಕಿಂದುವಾಡಿ ಸಮೀಪದ ವಡರಕಟ್ಟೆಯ ಬಳಿ ಶನಿವಾರ ಟಿಪ್ಪರ್ ಹಾಗೂ ಮಾರುತಿ ಶಿಫ್ಟ್ ಡಿಸೈರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಮೃತ ಪಟ್ಟಿದ್ದಾರೆ. ಮೈಸೂರಿನ ಆಲನಹಳ್ಳಿಯಲ್ಲಿ ವಾಸವಿರುವ ಶ್ರೀ ಲಕ್ಷ್ಮೀ (೨೦), ಮಂಡ್ಯ ತಾಲೂಕಿನ ಲಕ್ಷ್ಮೀ ದೊಡ್ಡಿಯ ನಿತಿನ್ (೨೧), ಮಂಡ್ಯದ ಹೊಸಹಳ್ಳಿ ಶ್ರೀರಾಮನಗರದ ನಿವಾಸಿ ಸುಹಾಸ್ (೨೧), ಮಂಡ್ಯದ ಹಲೆಗೆರೆ ಗ್ರಾಮದ ನಿವಾಸಿ ಶ್ರೇಯಸ್ (೨೧), ಪಿರಿಯಾಪಟ್ಟಣದ ತಾಲೂಕಿನ ಶಾನುಭೋಗನ ಹಳ್ಳಿಯ ಲಿಖಿತ (೨೦) ಮೃತಪಟ್ಟವರಾಗಿದ್ದಾರೆ.ಇವರಲ್ಲಿ ನಿತಿನ್ ಡಿಪ್ಲೊಮ ಓದಿಕೊಂಡಿದ್ದ. ಉಳಿದ ನಾಲ್ವರು ಮೈಸೂರಿನ ಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಐವರು ಸ್ನೇಹಿತರಾಗಿದ್ದು ಮಹಾಶಿವರಾತ್ರಿ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ಸಲುವಾಗಿ ಮೈಸೂರಿನಿಂದ ಮಾರುತಿ ಶಿಫ್ಟ್ ಡಿಸೈರ್ ಕಾರಿನಲ್ಲಿ ಬೆಳಗ್ಗೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಕೊಳ್ಳೇಗಾಲ ಮಾರ್ಗ ಹೋಗುವಾಗ ಮಧುವನಹಳ್ಳಿ ಹಾಗೂ ಚಿಕ್ಕಿಂದುವಾಡಿ ಗ್ರಾಮದ ನಡುವೆ ಸಿಗುವ ವಡ್ಡರಕಟ್ಟೆಯ ಬಳಿ ಹನೂರು ಕಡೆಯಿಂದ ಎದುರು ಬಂದ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಗೆ ಅಪಘಾತಕ್ಕೀಡಾದ ಎರಡು ವಾಹನಗಳು ರಸ್ತೆಯ ಬದಿಯ ೧೦ ಅಡಿ ಹಳ್ಳದಲ್ಲಿರುವ ಭತ್ತದ ಜಮೀನಿಗೆ ಉರುಳಿವೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಟಿಪ್ಪರ್ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ಐವರು ಸವಾರರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಟಿಪ್ಪರ್ ಚಾಲಕ ತಲೆ ಮರೆಸಿಕೊಂಡಿದ್ದಾನೆ. ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಹಾಗೂ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷ ಭೇಟಿ ನೀಡಿ ಪರಿಶೀಲಿಸಿದರು.ಅಪಘಾತ ಸ್ಥಳಕ್ಕೆ ಐಜಿಪಿ ಭೇಟಿ:ರಸ್ತೆ ಅಪಘಾತದಲ್ಲಿ ಐವರು ದುರ್ಮರಣಗೊಂಡಿರುವ ಮಾಹಿತಿ ತಿಳಿದ ಬಳಿಕ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಎಸ್ಪಿ ಶಶಿಧರ್, ಡಿವೈಎಸ್ಪಿ ಧಮೇಂದ್ರ, ಸಿಪಿಐ ಶಿವಮಾದಯ್ಯ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಬಳಿಕ ಕಾರಿನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆದು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಹಳ್ಳಕ್ಕೆ ಉರುಳಿದ್ದ ವಾಹನಗಳನ್ನು ಕ್ರೇನ್ ಸಹಾಯದಿಂದ ಮೇಲೆತ್ತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಪೈಕಿ 3 ಮಂದಿ ಯುವಕರು ಮಂಡ್ಯ ಮೂಲದವರು, ಇಬ್ಬರು ಯುವತಿಯರು ಮೈಸೂರು ಮೂಲದವರಾಗಿದ್ದು ಅಪಘಾತಕ್ಕೆ ಟಿಪ್ಪರ್ ವಾಹನ ಚಾಲಕ ವಾಹನಗಳನ್ನ ಒಟರ್ ಟೇಕ್ ಮಾಡಿ ಬೇಜವಾಬ್ದಾರಿ ಪ್ರದರ್ಶಿಸಿದ್ದೆ ಪ್ರಮುಖ ಕಾರಣ ಎಂದು ಎಸ್ಪಿ ತಿಳಿಸಿದರು. ಪರಾರಿಯಾಗಿರುವ ವಾಹನ ಚಾಲಕನ ಪತ್ತೆಗೆ ಕ್ರಮವಹಿಸಲಾಗುವುದು ಎಂದರು.;Resize=(128,128))
;Resize=(128,128))
;Resize=(128,128))
;Resize=(128,128))