ಉತ್ತರ ಕರ್ನಾಟಕದ ಗಂಡುಕಲೆ ಎಂದೇ ಹೆಸರಾಗಿರುವ ಬಯಲಾಟ (ದೊಡ್ಡಾಟ) ಹಾಗೂ ಭಜನೆಯಂತಹ ಭಕ್ತಿಮಾರ್ಗದ ಸೇವೆಯಲ್ಲಿ ಕನಕಗಿರಿಯ ಐದು ವರ್ಷದ ಬಾಲಕ ಗೌರೀಶ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಪ್ರಹ್ಲಾದರೆಡ್ಡಿ ಮಾದಿನಾಳ

ಕನಕಗಿರಿ: ಉತ್ತರ ಕರ್ನಾಟಕದ ಗಂಡುಕಲೆ ಎಂದೇ ಹೆಸರಾಗಿರುವ ಬಯಲಾಟ (ದೊಡ್ಡಾಟ) ಹಾಗೂ ಭಜನೆಯಂತಹ ಭಕ್ತಿಮಾರ್ಗದ ಸೇವೆಯಲ್ಲಿ ಇಲ್ಲಿಯ ಐದು ವರ್ಷದ ಬಾಲಕ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಪಟ್ಟಣದ ಬಾಲಕ ಗೌರೀಶನ ಪ್ರತಿಭೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಯಲಾಟ ಪರಂಪರೆ ಕನಕಗಿರಿಯಲ್ಲಿ ಜೀವಂತ ಉಳಿದುಕೊಳ್ಳುವ ಆಶಾಭಾವನೆ ಇಂತಹ ಬಾಲಕರಿಂದಾಗಿ ಮೂಡುತ್ತಿದೆ.

ಇಲ್ಲಿನ ಜೂಲಿಕೇರಿ ಓಣಿಯ ಹಿರಿಯ ಜೀವಿಗಳಿಂದ ಬಯಲಾಟದ ಪರಂಪರೆ ಮುಂದುವರಿದಿದೆ. ಮುಸ್ಲಿಂ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಬಾಲಕ ಗೌರೀಶ ಎಲ್‌ಕೆಜಿಯಲ್ಲಿ ಓದುತ್ತಿದ್ದು, ಸಣ್ಣ ವಯಸ್ಸಿನಲ್ಲಿ ಗಂಡು ಕಲೆ ಬಯಲಾಟದ ಜತೆಗೆ ಭಜನೆ, ಸಂಗೀತ ವಾದ್ಯಗಳನ್ನು ನುಡಿಸಿ ಮೈ ಮರೆತು ಬಿಡುತ್ತಾನೆ. ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮುಗಿದ ನಂತರ ಸಂಗೀತ ವಾದ್ಯ ನುಡಿಸುವುದು, ಬಯಲಾಟದ ನಕುಲನ ಪಾತ್ರಧಾರಿಯ ಸನ್ನಿವೇಶವನ್ನು ಸ್ಮರಿಸುವುದು, ಭಜನೆಯ ಹಾಡುಗಳನ್ನು ಹಾಡುವುದು ಮಾಡುತ್ತಾನೆ. ಎಳೆ ವಯಸ್ಸಿನ ಈ ಬಾಲಕನ ಕಲೆಯನ್ನು ಕಂಡು ಹಿರಿಯ ಪಾತ್ರಧಾರಿಗಳು ಮನಸೋತಿದ್ದಾರೆ.

ಶ್ರಾವಣದ ತಿಂಗಳ ಕಾಲ ಭಜನೆಯಲ್ಲೂ ಭಾಗಿ: ಪ್ರತಿ ವರ್ಷ ಶ್ರಾವಣ ಮಾಸದ ಅಂಗವಾಗಿ ಶ್ರೀ ಕನಕಾಚಲ ಭಜನಾ ಸಂಘ ಹಮ್ಮಿಕೊಳ್ಳುವ ಬೆಳಗಿನ ಜಾವ ತಿಂಗಳ ಪರ್ಯಂತ ಗ್ರಾಮ ಪ್ರದಕ್ಷಣೆಯಲ್ಲಿ ಸಹಿತ ಭಜನೆಯಲ್ಲಿ ನಿತ್ಯವೂ ಭಾಗವಹಿಸುವ ಈ ಬಾಲಕ ಭಜನೆಗೆ ತಕ್ಕಂತೆ ತಾಳ ಹಾಕುತ್ತಾ ಕುಣಿಯುತ್ತಾನೆ. ಚಿಕ್ಕವಯಸ್ಸಿನಲ್ಲಿಯೇ ಗೌರೀಶ ಅಸಾಧಾರಣ ಸಾಧನೆಯ ಕಡೆಗೆ ಹೆಜ್ಜೆ ಇಟ್ಟಿದ್ದು, ಬಯಲಾಟದ ಪ್ರಮುಖ ಕಲಾವಿದನಾಗುವ ಎಲ್ಲ ಲಕ್ಷಣ ಪ್ರಕಟಿಸುತ್ತಿದ್ದಾನೆ. ಬಾಲಕ ಈ ಸಾಧನೆಗೆ ಕುಟುಂಬಸ್ಥರು ಪ್ರೋತ್ಸಾಹ ನೀಡುತ್ತಿದ್ದಾರೆ.

ಎಐ ಯುಗದಲ್ಲಿ ಹೆಚ್ಚಿನ ಬಾಲಕರು ಮೊಬೈಲ್‌ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಈ ಬಾಲಕನ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಆಸಕ್ತಿ ತೋರುತ್ತಾರೆ: ಗೌರೀಶನಿಗೆ ಬಯಲಾಟದ ಆಸಕ್ತಿ ಇದೆ. ನಾಟಕದ ವಾದ್ಯಗಳ ನಾದ ಕೇಳಿದರೆ ಮನೆಯಿಂದ ತಾಲೀಮು ನಡೆಯುವ ಸ್ಥಳಕ್ಕೆ ಓಡಿ ಬರುತ್ತಾನೆ. ನಾಟಕದ ದೃಶ್ಯ ಹಾಗೂ ಮಾತುಗಳನ್ನು ಕೇಳಿ ಮನನ ಮಾಡಿಕೊಂಡು, ತನಗೆ ನೀಡಿದ್ದ ನಕುಲನ ಪಾತ್ರವನ್ನು ಜನ ಮೆಚ್ಚುವ ರೀತಿಯಲ್ಲಿ ಆಡಿದ್ದಾನೆ. ಭಜನೆ, ವಾದ್ಯ ನುಡಿಸುವುದರಲ್ಲೂ ಆಸಕ್ತಿ ತೋರುತ್ತಾನೆ ಎಂದು ಬಯಲಾಟದ ಕಥಾಸಂಚಾಲಕ ಪಂಪಾಪತಿ ತುಪ್ಪದ್ ಹೇಳಿದರು.