ಕನ್ನಡಪ್ರಭ ವಾರ್ತೆ ಬೀಳಗಿರೈತರ ಹಿತರಕ್ಷಣೆಗಾಗಿ ಕಬ್ಬಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಲು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕಾನೂನಾತ್ಮಕ ಅಧಿಕಾರವಿದ್ದರೂ ಕರ್ನಾಟಕದಲ್ಲಿ ಎಸ್‌ಎಪಿ ಜಾರಿಗೆ ಹಿಂದೇಟು ಹಾಕುತ್ತಿರುವುದೇಕೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ರೈತರ ಹಿತರಕ್ಷಣೆಗಾಗಿ ಕಬ್ಬಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಲು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕಾನೂನಾತ್ಮಕ ಅಧಿಕಾರವಿದ್ದರೂ ಕರ್ನಾಟಕದಲ್ಲಿ ಎಸ್‌ಎಪಿ ಜಾರಿಗೆ ಹಿಂದೇಟು ಹಾಕುತ್ತಿರುವುದೇಕೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್‌ಗೆ ₹355ರಿಂದ ₹416ರವರೆಗೆ ಎಸ್‌ಎಪಿ ಬೆಲೆ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ 800 ಬೆಲೆ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಎಸ್‌ಎಪಿ ಜಾರಿಗೊಳಿಸಿ, ಕನಿಷ್ಠ ₹1,000 ಬೆಲೆ ನಿಗದಿಪಡಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ಕೃಷಿ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸಗೊಬ್ಬರ, ನೀರು, ವಿದ್ಯುತ್, ಕೃಷಿ ಕಾರ್ಮಿಕರ ವೇತನ ಸೇರಿದಂತೆ ಕಬ್ಬು ಬೆಳೆಯಲು ಹಾಗೂ ಕುಟುಂಬ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಪ್ರತಿ ಕ್ವಿಂಟಾಲ್‌ಗೆ ₹365ರ ಎಫ್‌ಆರ್‌ಪಿ ದರ ಪರಿಷ್ಕರಿಸಿ ಹೆಚ್ಚಿಸಬೇಕು. ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀಡಿರುವ ₹50ರ ಎಸ್‌ಎಪಿ ನೆರವು ರೈತರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರವಲ್ಲ. ಇದು ರೈತರ ಕಣ್ಣಿಗೆ ಮಣ್ಣೆರಚಿದಂತಾಗಿದೆ ಎಂದು ಟೀಕಿಸಿದ ಅವರು, ಎಸ್‌ಎಪಿ ವಿಚಾರದಲ್ಲಿ ರಾಜ್ಯ ಸರ್ಕಾರ ತಾತ್ಸಾರ ಮನೋಭಾವ ತಾಳಿರುವುದು ಖಂಡನೀಯ ಎಂದರು.

ಪ್ರಧಾನಿ, ಸಂಬಂಧಪಟ್ಟ ಸಚಿವರು ಹಾಗೂ ಸ್ಥಳೀಯ ಸಂಸದರಿಗೆ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರೂ ಸಮರ್ಪಕ ಉತ್ತರ ದೊರೆಯದಿರುವುದು ಬೇಸರದ ಸಂಗತಿ. ದೆಹಲಿಯಲ್ಲಿ ನಡೆದ ರೈತರ ಸಭೆಯಲ್ಲಿ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ವಿರೂಪಾಕ್ಷಯ್ಯ ಹಿರೇಮಠ ಎಚ್ಚರಿಸಿದರು.