ಸಾರಾಂಶ
ತಾಲೂಕಿನ ಮುಖ್ಯ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳಲ್ಲಿ ದವಸ ಧಾನ್ಯಗಳ ಖರೀದಿಗೆ ಒಂದೇ ದರವನ್ನು ನಿಗದಿ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ವರ್ತಕರಿಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನ ಮುಖ್ಯ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳಲ್ಲಿ ದವಸ ಧಾನ್ಯಗಳ ಖರೀದಿಗೆ ಒಂದೇ ದರವನ್ನು ನಿಗದಿ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ವರ್ತಕರಿಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಸಭಾಂಗಣದಲ್ಲಿ ನಡೆದ ರೈತ ಸಂಘದವರು ಹಾಗೂ ಎಪಿಎಂಸಿ ವರ್ತಕರ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಎಲ್ಲ ಕಡೆಗಳಲ್ಲಿ ಒಂದೇ ದರ ನಿಗದಿ ಮಾಡಬೇಕು. ಅಂದಾಗ ಮಾತ್ರ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬಹುದಾಗಿದೆ. ವರ್ತಕರು ಬಿಳಿಹಾಳೆಯಲ್ಲಿ ಲೆಕ್ಕ ಬರೆದುಕೊಡುವುದು ಬಿಡಬೇಕು. ಎಲ್ಲ ದವಸ ಧಾನ್ಯಗಳ ಖರೀದಿಗೆ ಬಿಲ್ ಸಮೇತ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ ಮೂಲಿಮನಿ ಮಾತನಾಡಿ, ತೂಕದ ಸಂದರ್ಭ ಹಮಾಲರು ಬೇಕಾಬಿಟ್ಟಿಯಾಗಿ ರೈತರಿಂದ ಪಡೆಯುವ ಕಸದ ಕಾಳಿನ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ತೂಕದಲ್ಲಿ ಕೂಡ ವ್ಯತ್ಯಾಸ ಮಾಡುವುದು ಕಂಡು ಬರುತ್ತಿದೆ. ತಾಲೂಕಿನ ವಿವಿಧ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳಲ್ಲಿ ಏಕದರ ನಿಗದಿಯಾಗುವಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯ. ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಿಸಿ ರಸ್ತೆ ವ್ಯವಸ್ಥಿತವಾಗಿರುವಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.ಮನವಿ:ಕುಷ್ಟಗಿ ಎಪಿಎಂಸಿಯಲ್ಲಿ ಬಹಳಷ್ಟು ಹಮಾಲರು ಲೈಸೆನ್ಸ್ ಪಡೆದುಕೊಂಡಿದ್ದಾರೆ. ಆದರೆ ಕೆಲಸ ಮಾಡುತ್ತಿರುವವರ ಸಂಖ್ಯೆ ಕಡಿಮೆ ಇದ್ದು, ಕೆಲಸ ಮಾಡುವಂತಹ ಕಾರ್ಮಿಕರಿಗೆ ಲೈಸನ್ಸ್ ರಿನಿವಲ್ ಮಾಡಿಕೊಡಬೇಕು. ತಾವರಗೇರಾ ಉಪ ಮಾರುಕಟ್ಟೆಯ ವರ್ತಕರು ಮಾರುಕಟ್ಟೆ ಅಭಿವೃದ್ಧಿಗಾಗಿ ಅನುದಾನ ಅನುದಾನ ಹಂಚಿಕೆ ಮಾಡುವಂತೆ ಕೋರಿ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಅಂದಾನಪ್ಪ ಗಡಿಗಿ, ಮಹಾಂತಯ್ಯ ಅರಳಲಿಮಠ, ವಿಶ್ವನಾಥ ಕನ್ನೂರ್, ಮಹಾಂತೇಶ ಕಲಬಾವಿ, ಹನುಮಸಾಗರ ತಾವರಗೇರೆ, ಕುಷ್ಟಗಿ ಪಟ್ಟಣದ ವರ್ತಕರು ಹಮಾಲರು ರೈತ ಮುಖಂಡರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಉಪಸ್ಥಿತರಿದ್ದರು.