ಪ್ರತಿ ಟನ್ ಕಬ್ಬಿಗೆ 5500 ರು. ನಿಗದಿ ಪಡಿಸಿ: ಭರತ್ ರಾಜ್ ಆಗ್ರಹ

| Published : Nov 07 2025, 01:45 AM IST

ಪ್ರತಿ ಟನ್ ಕಬ್ಬಿಗೆ 5500 ರು. ನಿಗದಿ ಪಡಿಸಿ: ಭರತ್ ರಾಜ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕ ಜಿಲ್ಲೆಗಳ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕ ವೆಚ್ಚ ಕಳೆದು 3500 ಬೆಲೆಗೆ ಒತ್ತಾಯಿಸುತ್ತಿದ್ದಾರೆ. ಅದರ ಬದಲು ಪ್ರತಿ ಟನ್ ಕಬ್ಬಿಗೆ 5500 ಬೆಲೆಗಾಗಿ ಹೋರಾಟ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಪ-ಪ್ರತ್ಯಾರೋಪವನ್ನು ಬಿಟ್ಟು ಪ್ರತಿ ಟನ್ ಕಬ್ಬಿಗೆ 5500 ರು. ನಿಗಧಿ ಪಡಿಸಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷಗಳ ಮುಖಂಡರು ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವುದರಿಂದ ಕಬ್ಬು ಬೆಳೆಗಾರರ ಹಿತಕಾಯಲು ವಿಫಲರಾಗಿದ್ದಾರೆಂದು ದೂರಿದರು.

ಉತ್ತರ ಕರ್ನಾಟಕ ಜಿಲ್ಲೆಗಳ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕ ವೆಚ್ಚ ಕಳೆದು 3500 ಬೆಲೆಗೆ ಒತ್ತಾಯಿಸುತ್ತಿದ್ದಾರೆ. ಅದರ ಬದಲು ಪ್ರತಿ ಟನ್ ಕಬ್ಬಿಗೆ 5500 ಬೆಲೆಗಾಗಿ ಹೋರಾಟ ನಡೆಸಬೇಕೆಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ಉಪ ಉತ್ಪನ್ನಗಳ ಆಧಾರದ ಮೇಲೆ ಎಸ್‌ಎಪಿ ನಿಗದಿಪಡಿಸಲು ಮುಕ್ತ ಅವಕಾಶ ಇದ್ದರೂ ಸಕ್ಕರೆ ಮಾಲೀಕರ ಲಾಭಿಗೆ ಮಣಿದು ರೈತರನ್ನು ನಿರ್ಲಕ್ಷ್ಯಸಿಸುತ್ತಿದೆ. ಹರಿಯಾಣ ಸರ್ಕಾರ 900 ರು., ಪಂಜಾಬ್ ಸರ್ಕಾರ 800, ತಮಿಳುನಾಡು 250 ರು. ಗಳನ್ನು ಎಸ್‌ಎಪಿ ನಿಗದಿ ಮಾಡಿದೆ ಎಂದರು.

ಕರ್ನಾಟಕ ಸರ್ಕಾರ 2022 ಮತ್ತು 23ರಲ್ಲಿ ಪ್ರತಿ ಟನ್ ಕಬ್ಬಿಗೆ 150 ರು. ಗಳ ರಾಜ್ಯ ಸಲಹ ಬೆಲೆ ನಿಗದಿ ಮಾಡಿದ್ದರೂ ಕೂಡ ಜಾರಿಯಾಗಿಲ್ಲ. ನಂತರದ ವರ್ಷಗಳಲ್ಲಿಯೂ ಎಸ್‌ಎಪಿ ನಿಗಧಿಪಡಿಸಲು ಚಿಂತನೆ ನಡೆಸಿಲ್ಲ. ಅದ್ದರಿಂದ ಕೂಡಲೇ 500 ರು. ಎಸ್‌ಎಪಿಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನ ಸಕ್ಕರೆ ಕಾರ್ಖಾನೆಗಳೆ ಜವಾಬ್ದಾರಿ ತೆಗೆದು ಕೊಳ್ಳಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕು. ಸಕ್ಕರೆ ಇಳುವರಿ ಮತ್ತು ತೂಕದಲ್ಲಿ ನಡೆಯುವ ಮೋಸ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಕಬ್ಬು ಅಭಿವೃದ್ಧಿ ಮಂಡಳಿ ರೈತರಿಗೆ ಪ್ರತಿ ಎಕರೆಗೆ ಪ್ರೋತ್ಸಾಹ ಧನವಾಗಿ 10 ಸಾವಿರ ರು. ಹಣ ನೀಡಬೇಕು. ಕೇಂದ್ರದ ಸಕ್ಕರೆ ಅಭಿವೃದ್ಧಿ ಮಂಡಳಿಯು ಕಾರ್ಖಾನೆ ಮಾಲೀಕರಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಸತೀಶ್, ಕುಳೇಗೌಡ, ಮರಿಲಿಂಗೇಗೌಡ, ಜಯಸ್ವಾಮಿ ಉಪಸ್ಥಿತರಿದ್ದರು.