ಕುಡಿವ ನೀರಿನ ಕಾಮಗಾರಿ ಲೋಪ ಬಗೆಹರಿಸಿ

| Published : Jul 04 2025, 11:47 PM IST

ಸಾರಾಂಶ

ಕೊಳ್ಳೇಗಾಲ ನಗರಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಸದಸ್ಯ ಶಿವಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಅಲ್ತಾಫ್ ಅವರೇ ನೀವು ಇಲ್ಲಿ ಎಂಜಿನಿಯರ್ ಆಗಿ ಕೆಲಸಮಾಡಿದವರು, ಈಗ ಬಡ್ತಿ ಹೊಂದಿ ಜಿಲ್ಲಾ ಹಂತದ ಮುಖ್ಯ ಎಂಜಿನಿಯರ್ ಆಗಿರುವುದರಿಂದ ನಿಮಗೆ ಅನುಭವವಿದೆ, ಇಲ್ಲಿನ ಸಮಸ್ಯೆಗಳೆಲ್ಲಾ ನಿಮಗೆ ಗೊತ್ತು, ಇದನ್ನು ನೀವೆ ಪರಿಹರಿಸಿ, ಮೊದಲು 1ತಿಂಗಳೊಳಗೆ 24ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಇನ್ನಾದರೂ ಸ್ಪಂದಿಸಿ ಎಂದು ಅಲ್ತಾಫ್ ಅವರಿಗೆ ಶಾಸಕ ಕೃಷ್ಣಮೂರ್ತಿ ತಾಕೀತು ಮಾಡಿದರು.

ನಗರಸಭೆ ವಿಶೇಷ ಸಭೆಯಲ್ಲಿ ಮಾತನಾಡಿದ ಶಾಸಕರು, ಹಲವು ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ ಎಂಬ ದೂರಿದೆ. ಹಾಗಾಗಿ ಖುದ್ದು ಪರಿಶೀಲಸಬೇಕು, 24ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆಯ ಬಾಕಿ ಕಾಮಗಾರಿಯನ್ನು ನಗರಸಭೆ ಸದಸ್ಯರಿಂದ ಮಾಹಿತಿ ಪಡೆದು ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ನೀಡಿದರು.

ನಗರಸಭೆ ಆಯುಕ್ತರು ವಾರ್ಡ್‌ಗಳಿಗೆ ಭೇಟಿ ನೀಡಿ ವಾರದಲ್ಲಿ ಒಮ್ಮೆಯಾದರೂ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆಗೆ ಮುಂದಾಗಿ ಎಂದು ಸೂಚಿಸಿದರು. ಚೆಸ್ಕಾಂ ಅಧಿಕಾರಿಗಳಿಗೆ ಸಭೆಯಲ್ಲೆ ಕರೆ ಮಾಡಿದ ಶಾಸಕರು, 24ಗಂಟೆ ಕುಡಿಯುವ ನೀರಿನ ಪೂರೈಕೆ ಸಂಪರ್ಕವನ್ನೇಕೆ ಚಿಲಕವಾಡಿ ಎಕ್ಸ್ ಪ್ರೆಸ್ ಲೈನ್ ಗೆ ನೀಡಿದ್ದೀರಿ, ಕೂಡಲೆ ಬದಲಾಯಿಸಿ ಇಲ್ಲಾಗಿರುವ ಲೋಪ ಸರಿಪಡಿಸಿ ಎಂದರು. ಯೋಜನೆಗಳಿಗೆ ಅನುಮತಿ ಪಡೆಯುವುದು, ಕಾಮಗಾರಿಗೆ ಚಾಲನೆ ನೀಡುವುದೇ ಮುಖ್ಯವಲ್ಲ , ಅದರ ನಿರ್ವಹಣೆಯೂ ಮುಖ್ಯ ಈನಿಟ್ಟಿನಲ್ಲಿ ಹಿಂದಿನ ಲೋಪ ಮರುಕಳಿಸಿದಂತೆ ನಗರಸಭಾಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.ವ್ಯರ್ಥ ಕಾಮಗಾರಿ ಆಗಬಾರದು: ಜಿಲ್ಲಾಧಿಕಾರಿ ಖಡಕ್ ಸೂಚನೆ

ನಗರಸಭೆ ಸೇರಿದಂತೆ ಯಾವುದೆ ಸಂಸ್ಥೆ, ಇಲಾಖೆಗಳಿಗೆ ಸರ್ಕಾರದಿಂದ ಬಂದ ಅನುದಾನ ಬಳಕೆಯಾಗದೆ ವಾಪಸ್ ಹೋದರೂ ಚಿಂತೆ ಇಲ್ಲ, ಆದರೆ ಸರ್ಕಾರದ ಹಣ ಪೋಲಾಗುವಂತಹ ಕಾಮಗಾರಿ ಕೈಗೊಳ್ಳುವುದು ಬೇಡ, ಈನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಖಡಕ್ಕಾಗಿ ಸೂಚಿಸಿದರು.

ನಗರಸಭೆ ಅಧ್ಯಕ್ಷರಾದ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಅನುಮೋದನೆ ಪಡೆಯುವುದು, ಬಳಿಕ ಕಾಮಗಾರಿಗೆ ಚಾಲನೆ ನೀಡುವುದು, ಯಂತ್ರಗಳನ್ನು ಖರೀದಿಸುವುದು ಮುಖ್ಯವಲ್ಲ, ಖರೀದಿಯಾದ ಯಂತ್ರಗಳು ಬಳಕೆಯಾಗಬೇಕು, ಕೈಗೊಂಡ ಕಾಮಗಾರಿಗಳ ನಿರ್ವಹಣೆ ಸೂಕ್ತ ರೀತಿಯಲ್ಲಿರಬೇಕು, ಇದಾವುದು ಇಲ್ಲಿ ಆಗುತ್ತಿಲ್ಲ, ಜಿಲ್ಲಾದ್ಯಂತ ವೇಗದಿಂದ ಕಾಮಗಾರಿಗಳು ಸಾಗುತ್ತಿಲ್ಲ, ನಿಧಾನಗತಿಯಲ್ಲಿ ಕಾಮಗಾರಿಗಳು ಸಾಗುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿನ್ನೆಲೆಯಲ್ಲಿ ಅನುಮೋದನೆಗೂ ಮುನ್ನ ಅಧಿಕಾರಿಗಳು ನಿರ್ವಹಣೆ ಸಾದ್ಯವಾದಲ್ಲಿ ಮಾತ್ರ ಮುಂದಾಗಬೇಕು, ಸರ್ಕಾರಕ್ಕೆ ಹಣ ಹಿಂತಿರುಗಿಸಿ ಹೋದರೆ ಅಲ್ಲಿ ಇರುತ್ತೆ, ಆದರೆ ಇಲ್ಲಿ ಅನುದಾನ ಬಳಕೆಗಾಗಿ ಅನಾವಶ್ಯಕವಾಗಿ ವಸ್ತು, ಯಂತ್ರಗಳ ಖರೀದಿ, ಕಾಮಗಾರಿ ಇತರೆ ಕೈಗೊಳ್ಳುವುದು ಸರಿಯಲ್ಲ, ಯಂತ್ರೋಪಕರಣ ಖರೀದಿ ಮಾಡುವುದು ಸಹ ಮುಖ್ಯವಲ್ಲ ಅದು ಹಾಳಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

24ಗಂಟೆ ಕುಡಿಯುವ ನೀರಿನ ಕಾಮಗಾರಿ ಲೋಪ: ಡೀಸಿ ಅಸಮಾಧಾನ

24ಗಂಟೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಲೋಪ ಕುರಿತು ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು, ಅದನ್ನು ಸರಿಪಡಿಸಲಾಗಿದಯೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗುತ್ತಿಗೆ ಕಂಪನಿ ಮತ್ತು ಅಧಿಕಾರಿಗಳ ಕ್ರಮದ ವಿರುದ್ಧ ಅಸಮಧಾನ ಹೊರಹಾಕಿದರು.ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಕ್ರಮಕೈಗೊಂಡಿಲ್ಲ, ಮುಂದಿನ ಸಭೆಗೂ ಇದೆ ಹಣೆ ಬರಹ ಎಂದು ಸದಸ್ಯರು ಪ್ರಶ್ನಿಸುತ್ತಾರೆ, ಅಧಿಕಾರಿಗಳಿಂದ ಸಮರ್ಥನೆ ಉತ್ತರ ಬರುತ್ತೆ, ಇದನ್ನೆ ಕೇಳಿ ನಾನು ಹಾಗೂ ಸದಸ್ಯರು ಹೋಗಬೇಕಾಗುತ್ತದೆ ಸಂಬಂಧಿಸಿದವರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಪ್ರಶ್ನಿಸಿದರು.

ಕೆಲ ಕಾಮಗಾರಿ ನಿಧಾನಗತಿ ಸಾಗುತ್ತಿರುವ ಕುರಿತು ಸಂಬಂಧಿಸಿದರ ಕರೆದು ಬೈದರೆ ಮಾತ್ರ ಬೇಗ ಕೆಲಸ ಆಗುತ್ತೆ, ಇಲ್ಲದಿದ್ದರೆ ಕಾಮಗಾರಿಗಳೆಲ್ಲವೂ ನಿಧಾನಗತಿಯಲ್ಲೆ ಸಾಗುತ್ತಿದೆ, ಟೆಂಡರ್ ಪ್ರಕ್ರಿಯೆಗಳನ್ನು ಕೆಲ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ನೆಪ ಹೇಳುತ್ತಾರೆ, ಟಪಾಲ್ ನಲ್ಲಿ ನೀಡಿ ಮೇಲಧಿಕಾರಿಗಳ ಅನುಮತಿಗೆ ಕಾದು ಸಮಯ ವ್ಯರ್ಥ ಮಾಡುತ್ತಿದ್ದಾರೆ, ಖುದ್ದು ಕಚೇರಿಗೆ ಬಂದು ಅನುಮತಿ ಪಡೆಯಲ್ಲ ಈ ಬೆಳವಣಿಗಗಳಿಂದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಿಂದ ಮುಗಿವತನಕ ನಿಧಾನಗತಿಯೇ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸದರು.

ಕೊಳ್ಳೇಗಾಲದಲ್ಲಿ 24ಗಂಟೆ ಕುಡಿಯುವ ನೀರು ಪೂರೈಕೆ ಕಾಮಗಾರಿಯ ಹೊಣೆ ಹೊತ್ತ ಕಂಪನಿ ಮುಖ್ಯಸ್ಥರನ್ನು ಸಭೆಯಲ್ಲೆ ತರಾಟೆ ತೆಗೆದುಕೊಂಡು, ನೀರಿನ ಶುದ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಲ್ಯಾಬ್ ಪರೀಕ್ಷೆ ಮಾಡಿಸಲಾಗುತ್ತಿದೆಯೇ? ನಿಮ್ಮ ಪ್ರಯೋಗಾಲಯಕ್ಕೆ ನಾನೇ ಭೇಟಿ ನೀಡುವೆ ಎಂದರು.

ಸೋಲಾರ್ ಗ್ರೀನ್ ಸ್ಥಾಪನೆಯಿಂದ ನಗರಸಭೆಗೆ ಆದಾಯ:

ಕೊಳ್ಳೇಗಾಲದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೋಲಾರ್ ಪವರ್ ಗ್ರೀನ್ ಸ್ಥಾಪಿಸುವ ₹50 ಲಕ್ಷದ ಕಾಮಗಾರಿಗೆ ಅನುಮೋದನೆ ಪಡೆದುವುದು ಮುಖ್ಯವಲ್ಲ, ಹೆಚ್ಚು ವರ್ಷಗಳ ಕಾಲ ನಿರ್ವಹಣೆಯಲ್ಲಿ ಉತ್ತಮ ರೀತಿ ನಗರಸಭೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲ ಕಂಪನಿಗಳ ಜೊತೆ ಚರ್ಚಿಸಿ ಕಾಮಗಾರಿ ಅನುಮೋದಿಸುವ ಕುರಿತು ಚರ್ಚಿಸಲಾಯಿತು.

ನಗರಸಭೆ ಪರಿಸರ ಎಂಜಿನಿಯರ್ ಪ್ರಸನ್ನ ಮಾತನಾಡಿ, ಈ ಯೋಜನೆಯಿಂದ ನಗರಸಭೆಗೆ ವಿದ್ಯುತ್ ಖರ್ಚು ಉಳಿತಾಯ ಆಗಲಿದೆ, ಉತ್ಪಾದಿಸಿದ ಸೋಲಾರ್ ಸಹ ಚೆಸ್ಕಾಂಗೆ ನೀಡಿ ಲಾಭ ಪಡೆದುಕೊಳ್ಳಬಹುದಾಗಿತ್ತು ಇದರಿಂದ ಆದಾಯದ ಮೂಲ ಹೆಚ್ಚಲಿದೆ ಎಂದು ಮಾಹಿತಿ ನೀಡಿದರು. ₹49ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ಬಳಿ ಬಯೋ ಗ್ಯಾಸ್ ಅಳವಡಿಸುವುದು ಸೂಕ್ತವಲ್ಲ, ಅದೇ ಅನುದಾನವನ್ನು ವೆಟ್ ವೇಲ್ ಕಾಮಗಾರಿಗೆ ಬಳಸಲು ನಿರ್ಣಯಿಸಲಾಯಿತು. ಮುಕ್ತ ನಿಧಿ ಅನುದಾನ ಹಂಚಿಕೆ ಕುರಿತು ನಗರಸಭೆ 31 ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಕಷ್ಟವಾಗಲಿದ್ದು ಆಯುಕ್ತರು ಪರಿಶೀಲಿಸಿ ಕ್ರಮವಹಿಸಲು ಸೂಚಿಸಿದರು. ಟೆಂಡರ್ ಪಡೆದು ಸಕಾಲದಲ್ಲಿ ಕೆಲಸ ಮಾಡದ ಕಂಪನಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಪುನಃ ಅವಕಾಶ ನೀಡುವುದರಿಂದ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂಬ ವಿಚಾರ ಗಹನವಾಗಿ ಚರ್ಚೆಗೆ ಬಂತು. ಕುಡಿಯುವ ನೀರಿನ ಕಾಮಗಾರಿ ಲೋಪಕ್ಕೆ ಉನ್ನತ ಅಧಿಕಾರಿಗಳ ಸಮಿತಿ ತನಿಖೆ ನಡೆಸುವಂತೆ ಸಭೆ ನಿರ್ಣಯಿಸಿತು.

ಈ ವೇಳೆ ನಗರೋತ್ಙಾನ ಕಾಮಗಾರಿ ಬಗ್ಗೆ ಉಪಾಧ್ಯಕ್ಷ ಶಂಕರ್, ಧರಣೀಶ, ಶಂಕನಪುರ ಪ್ರಕಾಶ್ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿ ಗುತ್ತಿಗೆದಾರರು ಕರೆ ಸ್ವೀಕರಿಸಲ್ಲ, ಅನ್ಯ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಮಾಡಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದರು. ಶಂಕರ್ ನಾರಾಯಣಗುಪ್ತ ಸರ್ಕಟನ್ ಚಾನಲ್, ಯುಜಿಡಿ, ಕುಡಿಯುವ ನೀರಿನ ಕಾಮಗಾರಿ, ನಗರೋತ್ಥಾನ ಯೋಜನೆ ಜಾರಿಗೊಂಡು ವರುಷಗಳೆ ಸಂದರೂ ಇನ್ನು ಕಾಮಗಾರಿ ಮುಗಿದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಅಧ್ಯಕ್ಷ ಶಾಂತರಾಜು ಮಾತನಾಡಿ, ಈಹಿಂದೆ ಖರೀದಿಸಿದ್ದ ಅನೇಕ ಯಂತ್ರಗಳು ನಿರ್ವಹಣೆ ಇಲ್ಲದೆ ಮೂಲೆ ಸೇರಿವೆ, ಇನ್ನೊಂದಷ್ಟು ದಿನವಾದರೆ ಅವನ್ನು ದುರಸ್ಥಿ ಮಾಡಿಸದೆ ಹರಾಜು ಹಾಕಲಾಗುತ್ತದೆ, ಇದು ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.