ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಿ: ಮಹಮ್ಮದ ಮೋಹಸಿನ್

| Published : Jun 26 2024, 12:38 AM IST

ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಿ: ಮಹಮ್ಮದ ಮೋಹಸಿನ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿ ಮೊಹಮ್ಮದ್ ಮೋಹಸಿನ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಸರ್ಕಾರಿ ವಸತಿ ನಿಲಯಗಳಲ್ಲಿ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದ್ದು, ವಾರದೊಳಗೆ ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿ ಮೊಹಮ್ಮದ್ ಮೋಹಸಿನ್ ಸೂಚಿಸಿದರು.

ಜಿಪಂ ನೂತನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು, ನಿಗಮ ಮಂಡಳಿಗಳ ಅಧಿಕಾರಿಗಳೊಂದಿಗೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಅಡುಗೆ ಗುಣಮಟ್ಟ ಸರಿಯಾಗಿ ಇಲ್ಲದಿರುವುದು ಕಂಡು ಬಂದಿದೆ. ಅಡುಗೆ ಪದಾರ್ಥಗಳಿಗೆ ಕೊರತೆ ಇರದಿದ್ದರೂ ಕೂಡ ಗುಣಮಟ್ಟದಲ್ಲಿ ಕಡಿಮೆ ಇರುವುದು ಸರಿಯಲ್ಲ, ಅಡುಗೆ ಸಿಬ್ಬಂದಿಗೆ ತರಬೇತಿ ನೀಡಿ ವಸತಿ ನಿಲಯಗಳ ಅಡುಗೆ ಮನೆಗಳು ರುಚಿ-ಶುಚಿಯಾಗಿ ಇರುವಂತೆ ನೋಡಿಕೊಳ್ಳಲು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳನ್ನು ನಿಯಮನುಸಾರ ಮಾಡಿ ನಿಗದಿಪಡಿಸಿದ ಅನುದಾನ ಸದ್ಬಳಕೆ ಮಾಡುವುದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜವಾಬ್ದಾರಿಯಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿದಂತೆ ಇತರರು ಇದ್ದರು. 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮವಾಗಬೇಕಾಗಿದೆ. ಶಿಕ್ಷಕರ ವರ್ಗಾವಣೆ, ಶಿಕ್ಷಕರ ಕೊರತೆ ಎಂಬ ಕಾರಣ ಹೇಳದೇ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಕಾರ್ಯ ಮಾಡಿ, ಹೊರಗುತ್ತಿಗೆ ಸಿಬ್ಬಂದಿ ವೇತನವನ್ನು ಸಕಾಲದಲ್ಲಿ ಪಾವತಿಸುವುದರಿಂದ ಯಾವುದೇ ಸಮಸ್ಯೆಗಳು ಉಲ್ಬಣಿಸುವುದಿಲ್ಲ.

- ಜಾನಕಿ ಕೆ.ಎಂ. ಜಿಲ್ಲಾಧಿಕಾರಿ