ಸಾರಾಂಶ
ಹುಬ್ಬಳ್ಳಿ: ನವಲಗುಂದ ಮತ್ತು ಕುಂದಗೋಳ ಭಾಗದಲ್ಲಿ ಬೆಣ್ಣಿಹಳ್ಳದ ಪ್ರವಾಹದಿಂದ ಬೆಳೆ ಹಾನಿಯಾಗುತ್ತಿದೆ ಎಂದು ಪರಿಗಣಿಸಿ ಪರಿಹಾರ ಸಿಗುತ್ತಿದೆ. ಆದರೆ, ಭೈರಿದೇವರಕೊಪ್ಪ, ಉಣಕಲ್ ನಗರ ಪ್ರದೇಶದಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿ ಬೆಳೆ ಹಾನಿಯಾಗಿದೆ. ಈ ಅಂಶವನ್ನು ಕೃಷಿ ಮತ್ತು ಕಂದಾಯ ಇಲಾಖೆಗಳು ಪರಿಗಣಿಸಿ ಪರಿಹಾರ ದೊರಕಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಉಣಕಲ್ ಸಿದ್ದಪ್ಪಜ್ಜನ ಮಠದಲ್ಲಿ ಬುಧವಾರ ಅಧಿಕಾರಿಗಳು ಮತ್ತು ರೈತರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.ಭೈರಿದೇವರಕೊಪ್ಪ ಹಾಗೂ ಉಣಕಲ್ ಭಾಗದ ರೈತರು 2018ರಿಂದ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಇದು ಮಲೆನಾಡ ಪ್ರದೇಶವಲ್ಲ. ಮಳೆ ಬಂದರೆ ಮಾತ್ರ ಬೆಳೆ ಬರುತ್ತದೆ. ಆದ್ದರಿಂದ ಸಮಸ್ಯೆ ಮನಗಂಡು ಇಂದು ಕೃಷಿ ಇಲಾಖೆ ಕಂದಾಯ ವಿಮೆ ಇಲಾಖೆ ಸೇರಿದಂತೆ ಒಟ್ಟು ನಾಲ್ಕು ಇಲಾಖೆಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂವಾದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಭೈರಿದೇವರಕೊಪ್ಪ ಹಾಗೂ ಉಣಕಲ್ ಗ್ರಾಮಗಳ ರೈತರ ಹೊಲಗಳು ಜಿಪಂ ವ್ಯಾಪ್ತಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೂ ಬರುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತೆ ಸಭೆ ಸೇರಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಸಭೆಯಲ್ಲಿ ಶಾಸಕರು ಭರವಸೆ ನೀಡಿದರು.ಉಣಕಲ್ ಗ್ರಾಮದ ರೈತರಾದ ಚೆನ್ನು ಪಾಟೀಲ, ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗೇರಿ, ಶಂಕ್ರಪ್ಪ ಚಿಲ್ಲಣ್ಣವರ್, ನಾಗೇಶ್ ನವಲಗುಂದ, ಬಾಬಣ್ಣ ಹುಟಗಿ, ಮಲ್ಲಿಕಾರ್ಜುನ ಗುಂಡೂರ ಮಾತನಾಡಿ, 2018ರಿಂದ ಇಲ್ಲಿ ವರೆಗೆ ಬೆಳೆಹಾನಿ ಪರಿಹಾರ ಬಂದಿಲ್ಲ. ಕೃಷಿ ಇಲಾಖೆಯವರು ಸರಿಯಾದ ಸಮೀಕ್ಷೆ ನಡೆಸುತ್ತಿಲ್ಲ ಎಂದು ದೂರಿದರು.
ನಾವು ಈ ಭಾಗದ ರೈತರು ಸೋಯಾಬಿನ್, ಉದ್ದು ಮತ್ತು ಹೆಸರು ಬೆಳೆಗಳನ್ನು ಬೆಳೆಯುತ್ತಿದ್ದು, ಆದರೆ, ಕೃಷಿ ಇಲಾಖೆಯವರು ಸರ್ವೇ ನಡೆಸಿ, ನಂಬರ್ ಹಾಕಿ ಬೇರೆದೇ ಬೆಳೆಗಳನ್ನು ಅಪ್ಲೋಡ್ ಮಾಡುತ್ತಿದ್ದೀರಿ, ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಮಂಜುನಾಥ್ ಅಂತರವಳ್ಳಿ ಮಾತನಾಡಿ, ರೈತರ ಹೊಲಗಳಿಗೆ ಭೇಟಿ ನೀಡಿ, ಬೆಳೆ ಹಾನಿಯಾದ ಸಮೀಕ್ಷೆ ನಡೆಸಿ ಸರ್ಕಾರದ ಆ್ಯಪ್‌ಗಳಲ್ಲಿ ಪೋಟೋಗಳ ಸಮೇತ ಅಪ್ಲೋಡ್ ಮಾಡಿ ಈ ಕುರಿತು ಸರ್ಕಾರಕ್ಕೆ ಮಾಹಿತಿ ಕಳಿಹಿಸುತ್ತೇವೆ. ಆ ಸಮಯದಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಉಪಸ್ಥಿತರಿದ್ದರೆ ಸಮೀಕ್ಷೆ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕೃಷಿಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡವನ್ನು 18/18 ನಿರ್ಮಿಸಲು, ಪಂಪ್‌ಸೆಟ್, ಸಲಕರಣೆಗಳನ್ನು ವಿತರಿಸಲಾಗುತ್ತದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಿಜೆಪಿ ಸೆಂಟ್ರಲ್ ರೈತ ಮೋರ್ಚಾ ಅಧ್ಯಕ್ಷ ಎಂ.ಡಿ. ಮೆಣಸಿನಕಾಯಿ, ಸಿದ್ದಪ್ಪಜ್ಜ ಹಳೆಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶಿವು ಪಾಟೀಲ, ತಹಸೀಲ್ದಾರ್ ಮಹೇಶ್ ಅಸ್ತೆ, ಕೃಷಿ ಇಲಾಖೆಯ ಮಂಜುಳಾ ಕೃಷಿ ವಿಮೆಯ ಅಧಿಕಾರಿ ಶ್ರೀನಿವಾಸ್, ಪರಶುರಾಮ ಹೊಂಬಳ ಸೇರಿದಂತೆ ಈ ಭಾಗದ ರೈತರು ಮುಖಂಡರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))