ಗ್ಯಾರಂಟಿ ಯೋಜನೆಯ ಲೋಪದೋಷ ಸರಿಪಡಿಸುತ್ತೇವೆ: ಖಾನ್

| Published : Aug 29 2024, 12:49 AM IST

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 2,85,587 ಮನೆ ಯಜಮಾನಿಯರಿಗೆ ಪ್ರತಿ ತಿಂಗಳು ₹2000 ಹಣ ಸಂದಾಯ ಮಾಡಲಾಗುತ್ತಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಗೃಹ ಲಕ್ಷ್ಮಿ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಲ್ಲಿ ಅಧಿಕಾರಿಗಳ ಜೊತೆಗೆ ಪರಾಮರ್ಶೆ ನಡೆಸಿದಾಗ ಕೆಲ ಲೋಪದೋಷಗಳು ಕಂಡು ಬಂದಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ ಖಾನ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿಗಳನ್ನು ರಾಜ್ಯಾದ್ಯಂತ ಅನುಷ್ಠಾನ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರ ಬಜೆಟ್‌ನಲ್ಲೇ ₹58 ಸಾವಿರ ಕೋಟಿ ತೆಗೆದಿರಿಸಿದೆ. ರಾಜ್ಯಾದ್ಯಂತ ₹4.5 ಕೋಟಿ ಜನ ಫಲಾನುಭವಿಗಳಿದ್ದಾರೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ವಿಜಯನಗರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 2,85,587 ಮನೆ ಯಜಮಾನಿಯರಿಗೆ ಪ್ರತಿ ತಿಂಗಳು ₹2000 ಹಣ ಸಂದಾಯ ಮಾಡಲಾಗುತ್ತಿದೆ. ಗೃಹ ಜ್ಯೋತಿಯಡಿ 1,84,515 ಫಲಾನುಭವಿಗಳಿಗೆ ಶೂನ್ಯ ಬಿಲ್ಲು ಬರುತ್ತಿದೆ. ₹133.59 ಕೋಟಿ ಈ ಯೋಜನೆಗೆ ಪಾವತಿಯಾಗಿದೆ. ಯುವನಿಧಿಯಲ್ಲಿ 6704 ಫಲಾನುಭವಿಗಳಿಗೆ ತಲಾ ₹3000 ಹಾಗೂ ತಲಾ ₹1500ರಂತೆ ಹಣ ಸಂದಾಯ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 2,99,126 ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 4,17,54,532 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣ ಬೆಳೆಸಿದ್ದಾರೆ. ಯೋಜನೆಯಲ್ಲಿ ಕೆಲ ಲೋಪಗಳು ಕಂಡು ಬಂದಿದ್ದು, ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಬಸ್‌ ನಿಲ್ದಾಣದ ಶೌಚಾಲಯಗಳಲ್ಲಿ ಮಹಿಳೆಯರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸಲಾಗುವುದು. ಶಕ್ತಿ ಯೋಜನೆಯಿಂದ ನಿಗಮಗಳು ಲಾಭಕ್ಕೆ ಬಂದಿದ್ದು, ಹೆಚ್ಚಿನ ಬಸ್‌ಗಳನ್ನು ಓಡಿಸಲು ಕೂಡ ಸರ್ಕಾರಕ್ಕೆ ಕೋರಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಶಕ್ತಿ ಯೋಜನೆ ಅನುಷ್ಠಾನಗೊಳಿಸಲು ಕೂಡ ಸೂಚಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಉಪಾಧ್ಯಕ್ಷರಾದ ಕೆ.‌ಬಡಾವಲಿ, ಗುರುಬಸವರಾಜ, ಶಾಂತನಗೌಡ ಇದ್ದರು.