ಕಬ್ಬಿಗೆ ದರ ನಿಗದಿ ಮಾಡುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿಲ್ಲ. ಆದರೂ ರೈತರಿಗೆ ಸೂಕ್ತ ದರ ಕೊಡಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ರೈತರ ಸಮಸ್ಯೆ ಪರಿಹಾರಕ್ಕೆ ಬುಧವಾರ ಮುಖ್ಯಮಂತ್ರಿ ಅವರನ್ನು ಮತ್ತೊಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ಹಾವೇರಿ: ಕಬ್ಬಿಗೆ ದರ ನಿಗದಿ ಮಾಡುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿಲ್ಲ. ಆದರೂ ರೈತರಿಗೆ ಸೂಕ್ತ ದರ ಕೊಡಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ರೈತರ ಸಮಸ್ಯೆ ಪರಿಹಾರಕ್ಕೆ ಬುಧವಾರ ಮುಖ್ಯಮಂತ್ರಿ ಅವರನ್ನು ಮತ್ತೊಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ನಿಗದಿ ವಿಚಾರವಾಗಿ ರೈತ ಮುಖಂಡರು, ಮುಖ್ಯಮಂತ್ರಿ ಹಾಗೂ ಸಚಿವರು ಸೇರಿದಂತೆ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದೆ. ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ರಿಕವರಿ ಆಧಾರದ ಮೇಲೆ ದರ ನೀಡುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಕಡಿಮೆ ರಿಕವರಿ ಇದ್ದರೂ ಕಲಬುರಗಿಯ ಕಾರ್ಖಾನೆಯವರು 3,600 ರು. ದರ ನೀಡುತ್ತಿರುವುದು ಶ್ಲಾಘನೀಯ. ರೈತರ ಹಿತದೃಷ್ಟಿಯಿಂದ ಅವರು ಹೆಚ್ಚಿನ ದರ ನೀಡಿರಬಹುದು. ಅವರಿಗೆ ಸಕ್ಕರೆ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆದು ಮಾತನಾಡಿದ್ದೇನೆ. ಸಾಧ್ಯವಾದಷ್ಟು ಹೆಚ್ಚಿನ ದರ ನೀಡುವಂತೆ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೂ ಈ ಕುರಿತು ಕಾರ್ಖಾನೆಗಳೊಂದಿಗೆ ಚರ್ಚಿಸಿ ದರ ಕೊಡಿಸುವಂತೆ ತಿಳಿಸಿದ್ದೇನೆ. ಆದರೆ ಕಾರ್ಖಾನೆ ಮಾಲೀಕರು ನಷ್ಟದ ಕಾರಣ ನೀಡಿ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಾರ್ಖಾನೆಯವರು ದರ ನೀಡುವುದಿಲ್ಲ ಎಂದರೆ, ರೈತರನ್ನು ಕೈಬಿಡಲು ಸಾಧ್ಯವಿಲ್ಲ. ಇಬ್ಬರ ನಡುವೆ ಸಮನ್ವಯ ಸಾಧಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಕಾರ್ಖಾನೆ ಮಾಲೀಕರು ಸಭೆಗೆ ಬಂದರೆ ರೈತರು ಸಮಾಧಾನದಿಂದ ಚರ್ಚಿಸುವ ಪರಿಸ್ಥಿತಿ ಇರುವುದಿಲ್ಲ. ಪರಸ್ಪರ ಘರ್ಷಣೆ ಉಂಟಾಗಬಾರದು ಎಂಬ ಕಾರಣಕ್ಕೆ ಅವರು ಸಭೆಗೆ ಬಂದಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿರುವ ರೈತರಿಗೆ ಹೆಚ್ಚಿನ ದರ ನೀಡುವಂತೆ ಕಾರ್ಖಾನೆಗಳ ಮಾಲೀಕರಲ್ಲಿ ಮನವಿ ಮಾಡಬೇಕಿದೆ. ದರ ನಿಗದಿ ನನ್ನ ಕೈಯಲ್ಲಿದ್ದರೆ ಕೇವಲ ಐದು ನಿಮಿಷದಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದೆ ಎಂದರು.

ಕಬ್ಬಿನ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏಕೆ ನಿರ್ಧಾರ ಕೈಗೊಳ್ಳುತ್ತಿಲ್ಲ.? ಸಂಸದರು ರೈತರ ಮತ ಪಡೆದು ಆಯ್ಕೆಯಾಗಿಲ್ಲವೇ.? ರೈತರ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಿದೆ. ನಾವು ದೆಹಲಿಗೆ ತೆರಳಿ ನಮ್ಮ ಬೇಡಿಕೆಗಳನ್ನು ಸಮಾಧಾನದಿಂದ ಮಂಡಿಸಿ ಬಂದಿದ್ದೇವೆ. ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದರ ಜತೆಗೆ ಸಚಿವ ಸಂಪುಟ ಸಭೆಯಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

ರೈತರು ಧರಣಿ ನಡೆಸುವುದು ಅವರ ಹಕ್ಕು. ಧರಣಿ ಕೂರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ರೈತರ ಕಬ್ಬು ಬೆಂಕಿಗೆ ಆಹುತಿಯಾಗಿರುವುದು ಸೇರಿದಂತೆ ಅವರ ಸಂಕಷ್ಟಗಳ ಅರಿವು ನನಗಿದೆ. ನಾನೂ ಒಬ್ಬ ರೈತನಾಗಿದ್ದು, ನನ್ನ 16 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದೇನೆ. ನಮ್ಮ ರೈತರು ಕಬ್ಬು ಕಳುಹಿಸುವ ಕಾರ್ಖಾನೆಗಳಿಗೇ ನಾನೂ ಕಬ್ಬು ಕಳುಹಿಸುತ್ತೇನೆ. ಸಕ್ಕರೆ ಸಚಿವನಾಗಿ ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ. ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.