ಧ್ವಜಾರೋಹಣ: ಪುತ್ತೂರು ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ

| Published : Apr 11 2025, 12:30 AM IST

ಧ್ವಜಾರೋಹಣ: ಪುತ್ತೂರು ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಸುವ ಮೂಲಕ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಪ್ರಾರ್ಥನೆ ನಡೆದು ಬಳಿಕ ದೇವರ ಬಲಿ ಉತ್ಸವ, ಧ್ವಜಸ್ತಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಸುವ ಮೂಲಕ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಈ ಅಪೂರ್ವ ಘಳಿಗೆಗೆ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಸಾಕ್ಷಿಗಳಾದರು.

ಬೆಳಗ್ಗೆ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. ದೇವಾಲಯದಲ್ಲಿ ಪ್ರಾರ್ಥನೆ ನಡೆದು ಬಳಿಕ ದೇವರ ಬಲಿ ಉತ್ಸವ, ಧ್ವಜಸ್ತಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ವೈದಿಕ ವಿಧಾನಗಳನ್ನು ನಡೆಸಿದರು. ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು. ಬಳಿಕ ಧ್ವಜಾರೋಹಣ ನಡೆಯಿತು. ದೇವಳದ ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ನೇತೃತ್ವದಲ್ಲಿ ಧ್ವಜ ಮೇಲಕ್ಕೆ ಏರಿಸಲಾಯಿತು.

ದೇವಾಲಯದ ಎದುರು ಭಾಗ ಕಟ್ಟೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಭಗವಾಧ್ವಜಾರೋಹಣ ನೆರವೇರಿಸಲಾಯಿತು. ತಾತ್ಕಾಲಿಕವಾಗಿ ದೇವಾಲಯದ ಕೆರೆಯ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾದ ಅನ್ನಛತ್ರವನ್ನು ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಉದ್ಘಾಟಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ನಳಿನಿ ಪಿ. ಶೆಟ್ಟಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ದಿನೇಶ್ ಕುಲಾಲ್, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಕಡಮಜಲು, ಕೃಷ್ಣವೇಣಿ, ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹಾಗೂ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಮಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್. ಕೆ. ಜಗನ್ನಿವಾಸ ರಾವ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಹಸಿರುಕಾಣಿಕೆ ಸಮರ್ಪಣೆ:

ಜಾತ್ರೋತ್ಸವದ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಅಡಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ, ತರಕಾರಿ ಸೇರಿದಂತೆ ಸುವಸ್ತುಗಳನ್ನು ಗುರುವಾರ ಬೆಳಗ್ಗಿನಿಂದಲೇ ದೇವಾಲಯಕ್ಕೆ ತಂದೊಪ್ಪಿಸಿದರು. ಧ್ವಜಾರೋಹಣದ ಬಳಿಕ ಸುವಸ್ತುಗಳನ್ನು ಧ್ವಜಸ್ತಂಭದ ಕಟ್ಟೆಗೆ ಸುತ್ತಲೂ ಆಕರ್ಷಕವಾಗಿ ಕಟ್ಟಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರಾ ಧ್ವಜಾರೋಹಣದ ಸಂದರ್ಭದಲ್ಲಿ ದೇವಾಲಯದ ಮೇಲ್ಭಾಗದಲ್ಲಿ ಗರುಡ ಸುತ್ತು ಹೊಡೆಯುವ ದೃಶ್ಯ ಕಂಡುಬಂತು. ತಾತ್ಕಾಲಿಕ ಅನ್ನಛತ್ರದಲ್ಲಿ ಪ್ರಥಮ ದಿನವೇ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಜಾತ್ರೋತ್ಸವದಲ್ಲಿ ಇಂದು:

ಜಾತ್ರೋತ್ಸವದಲ್ಲಿ ೨ನೇ ದಿನವಾದ ಶುಕ್ರವಾರ ಬೆಳಗ್ಗೆ ಬಲಿ ಉತ್ಸವ, ರಾತ್ರಿ ಉತ್ಸವದ ಬಳಿಕ ದೇವರ ಪೇಟೆ ಸವಾರಿಯು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟುಗಳಲ್ಲಿ ನಡೆಯಲಿದ್ದು, ಇಲ್ಲಿನ ಕಟ್ಟೆಗಳಲ್ಲಿ ದೇವರಿಗೆ ಕಟ್ಟೆಪೂಜೆ ನಡೆಯಲಿದೆ. ಮಧ್ಯಾಹ್ನ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ, ಸಿಬಂದಿಯಿಂದ ಅನ್ನಸಂತರ್ಪಣೆ ನಡೆಯಲಿದೆ.