ಸಾರಾಂಶ
ರಾಮನಗರ: ದೆಹಲಿ ಚಲೋ ವೇಳೆ ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿ ನಾಲ್ವರು ರೈತರ ಸಾವಿಗೆ ಕಾರಣರಾದ ಪೊಲೀಸರು, ಕೇಂದ್ರ ಸರ್ಕಾರದ ವಿರುದ್ಧ ರೈತಸಂಘದ ಕಾರ್ಯಕರ್ತರು ಸೋಮವಾರ ರಾತ್ರಿ ನಗರದ ಐಜೂರು ವೃತ್ತದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ರೇಲ್ವೆ ನಿಲ್ದಾಣದ ವೃತ್ತದವರೆಗೂ ನಡೆಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ದೆಹಲಿಯಲ್ಲಿ ರೈತರು ಭಿಕ್ಷೆ ಬೇಡುತ್ತಿಲ್ಲ. ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ. ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ ರೈತರ ಮೇಲೆ ಅಶ್ರುವಾಯು ಸಿಡಿಸಿ ರೈತರನ್ನು ಕೊಲೆ ಮಾಡುತ್ತಿದ್ದಾರೆ. ರೈತ ಹೋರಾಟಗಾರರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಹೇಳಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿ ಜಾರಿ, ಬೆಂಬಲ ಬೆಲೆ, ಡಬ್ಲ್ಯೂಟಿಒ ಒಪ್ಪಂದದಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಭಿಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು. ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ನೆರವು ನೀಡಬೇಕು. ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತ ಚಳವಳಿಯ ದಿಕ್ಕು ತಪ್ಪಿಸಲು ವಾಮ ಮಾರ್ಗ ಬಳಸುತ್ತಿದೆ ಎಂದು ದೂರಿದರು.
ಪ್ರಗತಿಪರ ಸಂಘಟನೆಗಳ ಮುಖಂಡ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ರೈತರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದೆ. ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ ಸಮಸ್ಯೆ ಬಗೆಹರಿಯುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಎಂ.ಪುಟ್ಟಸ್ವಾಮಿ, ರಾಜು, ನಾಗರಾಜು, ರಾಮೇಗೌಡ, ರಾಮು, ತೇಜಸ್ವಿ ಮತ್ತಿತರರು ಭಾಗವಹಿಸಿದ್ದರು.26ಕೆಆರ್ ಎಂಎನ್ 6.ಜೆಪಿಜಿ
ರಾಮನಗರದಲ್ಲಿ ಸೋಮವಾರ ರಾತ್ರಿ ರೈತಸಂಘದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.