ಕಾರಟಗಿ: ದೋಷರಹಿತ ಮತದಾರರ ಪಟ್ಟಿ ಪ್ರಜಾಪ್ರಭುತ್ವ ಬಲಪಡಿಸುತ್ತದೆ. ಅರ್ಹ ಪ್ರತಿಯೊಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಕೆಪಿಎಸ್ ನ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಕೊಪ್ಪಳ ಹಾಗೂ ತಾಲೂಕು ಸ್ವೀಪ್ ಸಮಿತಿಯ ಸಂಯಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಚುನಾವಣಾ ಆಯೋಗ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಇಂದಿನಿಂದ ಆರಂಭಿಸಿದೆ.ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಮೃತಪಟ್ಟವರ ಅಥವಾ ಸ್ಥಳಾಂತರಗೊಂಡವರ ಹೆಸರು ಪಟ್ಟಿಯಿಂದ ತೆಗೆದುಹಾಕುವ ಕಾರ್ಯ ನಡೆಯುತ್ತಿದೆ. ಅರ್ಹ ಮತದಾರರು ನಮೂನೆ 6,7,8 ಭರ್ತಿ ಮಾಡಿ ಆಯಾ ಬಿಎಲ್‌ಒಗಳಿಗೆ ನೀಡಬೇಕು ಎಂದು ಹೇಳಿದರು.
ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಯಾದವ್ ಮಾತನಾಡಿ, ಮತದಾನ ಹಕ್ಕು ಪ್ರಜಾಪ್ರಭುತ್ವದ ಮೂಲ ಅಡಿಪಾಯವಾಗಿದೆ. ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಮ್ಯಾಪಿಂಗ್ ಕಾರ್ಯ ಬಿಎಲ್‌ಒಗಳು ನಿರಂತರವಾಗಿ ಮಾಡುತ್ತಿದ್ದಾರೆ. ಎಸ್‌ಐಆರ್ ಯಶಸ್ವಿಯಾದರೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಇಂದಿನಿಂದ ಬೂತ್ ಮಟ್ಟದ ಅಧಿಕಾರಿ ಪ್ರತಿಯೊಂದು ಮನೆ ಮನೆ ಭೇಟಿ ನೀಡಲಿದ್ದು ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಒದಗಿಸಿ ಈ ಕಾರ್ಯಕ್ಕೆ ಸಹಕಾರ ನೀಡಿ ಎಂದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಅಭಿಯಾನದ ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಜಾಗೃತಿ ಫಲಕ ಹಿಡಿದು ಪ್ರದರ್ಶಿಸಿ ಘೋಷಣೆ ಕೂಗುವುದರ ಮೂಲಕ ನಗರದ ನವಲಿ ಮುಖ್ಯ ರಸ್ತೆಯಿಂದ ಬಸ್ ನಿಲ್ದಾಣದೊರಗೆ ತೆರಳಿ ಜಾಗೃತಿ ಮೂಡಿಸುವ ಸಹಕಾರಿಯಾದರು.
ಈ ವೇಳೆ ಕೆಪಿಎಸ್ ಪ್ರಾಚಾರ್ಯ ನಾಗರಾಜ್ ಮೈನಳ್ಳಿ, ಉಪ ಪ್ರಾಚಾರ್ಯ ಶರಣಪ್ಪ ಸೋಮಲಾಪುರ ಸೇರಿದಂತೆ ತಾಪಂ ಐಇಸಿ ಸಂಯೋಜಕ ಸೋಮನಾಥ ಗೌಡ, ಎನ್ ಆರ್ ಎಲ್ಎಂ ಸಿಬ್ಬಂದಿ ಪಂಪಾಪತಿ ಕರಡೋಣಿ, ಶಿವರಾಜ್, ಗೀತಾಬಾಯಿ, ಕಾಲೇಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.