ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನದ ಶಿವಮೊಗ್ಗ ಮಾರ್ಗಕ್ಕೆ ಮೊದಲ ಟಿಕೆಟ್ ಖರೀದಿಸಿದ ಪ್ರಯಾಣಿಕರಿಂದಲೇ ದೀಪ ಬೆಳಗಿಸಿ ಹೊಸ ಮಾರ್ಗಕ್ಕೆ ಚಾಲನೆ ನೀಡಲಾಯಿತು.ಚೆನ್ನೈನಿಂದ ಬೆಳಗ್ಗೆ 10:40ಕ್ಕೆ ಹೊರಡಬೇಕಿದ್ದ ವಿಮಾನ ಗುರುವಾರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಬೆಳಗ್ಗೆ 11.03ಕ್ಕೆ ಹಾರಾಟ ಆರಂಭಿಸಿ ಮಧ್ಯಾಹ್ನ ಶಿವಮೊಗ್ಗಕ್ಕೆ ಬಂದಿಳಿಯಿತು. ಈ ವೇಳೆ ಸ್ಪೈಸ್ ಜೆಟ್ ವಿಮಾನಕ್ಕೆ ಎರಡು ಬದಿಯಿಂದ ನೀರು ಹಾಯಿಸಿ ವಾಟರ್ ಕೆನಾನ್ ಸ್ವಾಗತ ನೀಡಿ, ಶಿವಮೊಗ್ಗಕ್ಕೆ ಬಂದಿಳಿದ ಪ್ರಯಾಣಿಕರಿಗೆ ಸ್ಪೈಸ್ ಜೆಟ್ ಸಂಸ್ಥೆ ವತಿಯಿಂದ ವಿಶೇಷ ಸ್ವಾಗತ ಕೋರಲಾಯಿತು.
* ಶಿವಮೊಗ್ಗದಲ್ಲಿ ಚಾಲನೆ:ಉಡಾನ್ ಯೋಜನೆಯಡಿ ಹೈದರಾಬಾದ್ ಮತ್ತು ಚೆನ್ನೈ ನಡುವೆ ನೇರ ವಿಮಾನ ಸೇವೆ ಪ್ರಾರಂಭಕ್ಕೆ ಗುರುವಾರ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸದ ರಾಘವೇಂದ್ರ ಅವರು, ಈ ಮಾರ್ಗದಲ್ಲಿ ವಿಮಾನಯಾನ ಆರಂಭಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಪ್ರಧಾನಿ ಮೋದಿಜಿಯವರಿಗೆ ಅಭಿನಂದನೆ ತಿಳಿಸಿದರು.ಶಿವಮೊಗ್ಗ ಮತ್ತು ಹೈದರಾಬಾದ್ ಹಾಗೂ ಚೆನ್ನೈ ನಡುವೆ ನೇರ ವಿಮಾನ ಸೇವೆ ಪ್ರಾರಂಭವಾಗಿರುವುದನ್ನು ಘೋಷಿಸಲು ನನಗೆ ಅಪಾರ ಸಂತೋಷವಾಗಿದೆ. ಈ ಹೊಸ ಸೇವೆಗಳು ನಮ್ಮ ಮಲೆನಾಡು ಪ್ರದೇಶದಲ್ಲಿ ಸಂಪರ್ಕತೆ ಹೆಚ್ಚಿಸುವಂತಾಗಿದ್ದು, ಇದರಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕತೆ ಬಲವರ್ಧನೆ ಕಾಣಲಿವೆ. ಈ ಸೇವೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ದೂರದೃಷ್ಟಿಯ ನಾಯಕತ್ವದ ಫಲವಾಗಿದ್ದು, ಅವರು ದೇಶಾದ್ಯಂತ ಸಂಪರ್ಕತೆಯನ್ನು ವಿಸ್ತರಿಸಲು ಉಡಾನ್ ಯೋಜನೆ ಮೂಲಕ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿನ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಕೇವಲ 20 ತಿಂಗಳ ಅವಧಿಯಲ್ಲಿ ಇದು ಪ್ರಾದೇಶಿಕ ಸಂಪರ್ಕತೆಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ಇಂದು ಈ ವಿಮಾನ ನಿಲ್ದಾಣವು ಪ್ರತಿ ದಿನ 12 ಪ್ರಯಾಣಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ವ್ಯಾಪಕ ಪ್ರಗತಿಗೆ ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದರು.ಹೈದರಾಬಾದ್ ಮತ್ತು ಚೆನ್ನೈಗೆ ಹೊಸ ವಿಮಾನಗಳೊಂದಿಗೆ, ಶಿವಮೊಗ್ಗವು ಈಗ ಬೆಂಗಳೂರು, ತಿರುಪತಿ, ಮತ್ತು ಗೋವಾ ಗೆ ನೇರ ಸಂಪರ್ಕ ಹೊಂದಿದ್ದು, ಇದರಿಂದ ನಮ್ಮ ಜನರಿಗೆ ವಿವಿಧ ಪ್ರಮುಖ ಪ್ರದೇಶಗಳ ಸಂಪರ್ಕ ಸುಲಭಗೊಳಿಸಲಾಗಿದೆ. ಈ ಹೊಸ ಮಾರ್ಗಗಳು ನಮ್ಮ ಮಲೆನಾಡು ಪ್ರದೇಶದ ಪ್ರವಾಸೋದ್ಯಮ ಮತ್ತು ವ್ಯಾಪಾರದ ಬೆಳವಣಿಗೆಗೆ ಮಹತ್ವದ ಕಾರಣವಾಗಲಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸದಾ ಬೆಂಬಲದಿಂದ ಮಲೆನಾಡು ಮತ್ತು ಶಿವಮೊಗ್ಗದ ಜನತೆ ಈ ಅತ್ಯಾಧುನಿಕ ವಿಮಾನ ಸಂಪರ್ಕದಿಂದ ಲಾಭ ಪಡೆಯುತ್ತಿದ್ದಾರೆ. ಈ ಹೊಸ ವಿಮಾನ ಮಾರ್ಗಗಳು ನಮ್ಮ ಪ್ರದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂದರು.ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜನತೆ ಈ ಹೊಸ ಸಂಪರ್ಕದ ಪ್ರಯೋಜನ ಪಡೆಯುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ವ್ಯವಸ್ಥಾಪಕ ಸಿ.ಶಮಂತ್, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.ವಿಮಾನ ಪ್ರಯಾಣದ ಸಮಯ:
ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 12.10ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12.35ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.05ಕ್ಕೆ ಹೈದರಾಬಾದ್ ತಲುಪಲಿದೆ. ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗ ತಲುಪಲಿದೆ. ಸಂಜೆ 4.25ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.55ಕ್ಕೆ ಚೆನ್ನೈ ತಲುಪಲಿದೆ.