ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಜೊತೆ ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಚರ್ಚೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಜೊತೆ ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಚರ್ಚೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.ವಿಮಾನ ಸಂಚಾರ ಏಕಾಏಕಿ ಕಡಿಮೆಯಾಗಿದ್ದು, ಹಲವಾರು ನಗರಗಳಿಗೆ ಸಂಚರಿಸುತ್ತಿದ್ದ ವಿಮಾನಗಳು ರದ್ದಾಗುತ್ತಿರುವುದರಿಂದ ಜಿಲ್ಲೆಯ ಉದ್ಯಮ ವಲಯದ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಇದರಿಂದ ಬೆಳಗಾವಿ ಅಭಿವೃದ್ಧಿಗೆ ಹಿನ್ನಡೆಯಾಗುವ ಆತಂಕ ವ್ಯಕ್ತವಾದ ಹಿನ್ನೆಲೆ, ತಕ್ಷಣ ವಿಮಾನ ಸೇವೆ ಪುನರಾರಂಭವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಾಣಿಜ್ಯೋದ್ಯಮ ಸಂಘ ಎಚ್ಚರಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ಇಂಡಿಗೋ ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳು ಸಂಘದ ಕಚೇರಿಗೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಬುಧವಾರ ಸ್ಟಾರ್ ಏರ್ ವೇಸ್ ಪ್ರತಿನಿಧಿಗಳು ಆಗಮಿಸಿ ಉದ್ಯಮಿಗಳ ಅಹವಾಲು ಆಲಿಸಿದ್ದರು.ಬೆಳಗಾವಿಯಿಂದ ಬೆಂಗಳೂರು ಜೊತೆಗೆ ಮುಂಬೈ, ಚೆನ್ನೈ, ಅಹಮದಾಬಾದ್, ಜೋಧಪುರ ನಗರಗಳಿಗೆ ತುರ್ತಾಗಿ ವಿಮಾನ ಸೇವೆ ಅಗತ್ಯವಿದೆ ಎಂದು ಉದ್ಯಮಿಗಳು ಆಗ್ರಹಿಸಿದರು. ವಾರಾಣಸಿ ಹಾಗೂ ಕೊಚ್ಚಿ ನಗರಗಳಿಗೆ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬೆಳಗಾವಿ ರಫ್ತು ಉದ್ಯಮ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಸಂಪರ್ಕ ಕಡಿತವಾದರೆ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು, ಮುಂಬೈ ವಿಮಾನ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಹಾಗೂ ಇತರೆ ನಗರಗಳಿಗೆ ಸೇವೆ ಪುನರಾರಂಭ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಅಂತಾರಾಷ್ಟ್ರೀಯ ನಗರಗಳಿಗೆ ಸಹ ದಿನಕ್ಕೆ ಕನಿಷ್ಠ ಒಂದೆರಡು ವಿಮಾನಗಳು ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬ ವಿಚಾರದಲ್ಲೂ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಲಘು ಉದ್ಯೋಗ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ್ ಸಬ್ನಿಸ್, ನಿರ್ದೇಶಕರಾದ ವಿಕ್ರಮ ಜೈನ್, ಉದಯ ಜೋಶಿ, ಎಂ.ಕೆ.ಹೆಗಡೆ, ಆನಂದ ದೇಸಾಯಿ, ಸಂದೀಪ ಬಾಗೇವಾಡಿ, ಸಂಜಯ ಪೋತದಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಇಂಡಿಗೋ ಸಂಸ್ಥೆಯ ಮನೋಜ್ ಪ್ರಭು, ವಿಮಾನ ನಿಲ್ದಾಣದ ಸೀನಿಯರ್ ಮ್ಯಾನೇಜರ್ ಮುಕುಲ್ ಶರ್ಮಾ, ಅಸಿಸ್ಟೆಂಟ್ ಮ್ಯಾನೇಜರ್ ಚೇತನ್, ಸಲಹಾ ಸಮಿತಿ ಸದಸ್ಯ ಜಯಸಿಂಗ್ ರಜಪೂತ, ಬೆಳಗಾವಿ ಡೆವಲಪ್‌ಮೆಂಟ್ ಕೋರ್ ಗ್ರೂಪ್ ಸದಸ್ಯ ಸತೀಶ್ ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.