ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕೇಂದ್ರದ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜ. 24 ರಂದು ಪಟ್ಟಣದ ರೇಡಿಯೋ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಜನತೆಯಿಂದ ಅಭಿಮಾನದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.ಈ ಹಿನ್ನೆಲೆ ಪಟ್ಟಣದ ರೇಡಿಯೋ ಮೈದಾನಕ್ಕೆ ಮಾಜಿ ಸಚಿವ ಸಾ.ರಾ. ಮಹೇಶ್ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ನಿರ್ಮಾಣ ಮಾಡಲಾಗುತ್ತಿರುವ ಬೃಹತ್ ವೇದಿಕೆ ಪರಿಶೀಲಿಸಿದರು.
ಸಾ.ರಾ.ಮಹೇಶ್ ಮಾತನಾಡಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಸಂಸತ್ ಅಧಿವೇಶನ ಇರುವುದರಿಂದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುವಿರುವುದಿಲ್ಲ, ಆದ್ದರಿಂದ ಕ್ಷೇತ್ರದ ಜನತೆ ಪರವಾಗಿ ಅಭಿಮಾನದ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವುದರಿಂದ ಜೆಡಿಎಸ್, ಯುವ ಜೆಡಿಎಸ್, ಮಹಿಳಾ ಜೆಡಿಎಸ್ ಘಟಕ ಹಾಗೂ ಜೆಡಿಎಸ್ ವಿವಿಧ ಘಟಕಗಳು ಸೇರಿದಂತೆ ವಿವಿಧ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕುಮಾರಣ್ಣ ಅವರನ್ನು ಅಭಿನಂದಿಸಲಿದ್ದಾರೆ ಎಂದು ಪ್ರಕಟಿಸಿದರು.
ಕೇಂದ್ರ ಸಚಿವ ಕುಮಾರಣ್ಣ ಅವರ ಅಭಿನಂದನಾ ಸಮಾರಂಭಕ್ಕೆ ಕೆ.ಆರ್. ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನಿಂದ 25 ರಿಂದ 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ, ಅಂದೇ ಕಾರ್ಯಕ್ರಮ ಮುಗಿದ ನಂತರ ಆಗಮಿಸಿದ ಎಲ್ಲರಿಗೂ ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣ ( ಸ್ಟೇಡಿಯಂ) ಆವರಣದಲ್ಲಿ ಬಾಡೂಟ ಹಾಗೂ ಸಸ್ಯಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲದೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ಪ್ರತ್ಯೇಕವಾಗಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಕೇಂದ್ರ ಸಚಿವರಾದ ಕುಮಾರಣ್ಣ ಅವರ ಅಭಿಮಾನದ ಅಭಿನಂದನಾ ಸಮಾರಂಭಕ್ಕೆ ರಾಜ್ಯ ಯುವ ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಥವಾ ಬಿ.ಎಸ್. ಯಡಿಯೂರಪ್ಪ ಅವರ ಹಿರಿಯ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಮೈಸೂರು ಜಿಲ್ಲೆಯ ಪಕ್ಷದ ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ರಾಜ್ಯ ಬಿಜೆಪಿ ಶಾಸಕರು, ಮಾಜಿ ಸಚಿವರು, ಮುಖಂಡರು ಸೇರಿದಂತೆ ರಾಜ್ಯದ ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 224 ಗ್ರಾಮಗಳಿಗೂ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಮನೆಯ ಕಾರ್ಯಕ್ರಮವೆಂದು ಬಾರಿ ಸಂಖ್ಯೆಯಲ್ಲಿ ಜನರನ್ನು ಕರೆ ತನ್ನಿ ಎಂದು ಕರೆ ಕೊಡಲಾಗಿದೆ ಎಂದರು.ಇದಕ್ಕೂ ಮೊದಲು ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಾಲೂಕು ಯುವ ಜೆಡಿಎಸ್ ಮಾಜಿ ಅಧ್ಯಕ್ಷ ಹೆಬ್ಬಾಳು ಸುಜಯ್, ಜೆಡಿಎಸ್ ನಗರಾಧ್ಯಕ್ಷ ಸಂತೋಷ್ ಗೌಡ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ, ಜಿಲ್ಲಾ ಯುವ ಜೆಡಿಎಸ್ ಗ್ರಾಮಾಂತರ ಉಪಾಧ್ಯಕ್ಷ ಕೆಗ್ಗೆರೆ ಕುಚೇಲ, ಪುರಸಭಾ ಸದಸ್ಯರಾದ ಉಮೇಶ್, ಕೆ.ಎಲ್. ಜಗದೀಶ್, ಜೆಡಿಎಸ್ ಮುಖಂಡರಾದ ಬಾಲಾಜಿ ಗಣೇಶ್, ಪುಟ್ಟರಾಜು, ಮಹೇಶ್, ಕೃಷ್ಣಶೆಟ್ಟಿ, ಜೆಡಿಎಸ್ ಮಹಿಳಾ ಘಟಕದ ನಗರ ಕಾರ್ಯದರ್ಶಿ ಮೋಹನ್ ಕುಮಾರಿ, ರೂಪ ಸತೀಶ್, ಸುನೀಲ್, ಘನತೆಕುಮಾರ್, ದೀಪು ಇದ್ದರು.