ಕಪಿಲಾ ನದಿಗೆ 51 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ

| Published : Jul 28 2025, 12:30 AM IST

ಕಪಿಲಾ ನದಿಗೆ 51 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲು ನದಿಯ ಪ್ರವಾಹದಿಂದಾಗಿ ಸಮೀಪದ ಪರಶುರಾಮ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆ

ಕನ್ನಡಪ್ರಭ ವಾರ್ತೆ ನಂಜನಗೂಡುಕಪಿಲಾ ನದಿಗೆ 51 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿರುವ ಹಿನ್ನೆಲೆ ನಂಜನಗೂಡಿನಲ್ಲಿ ಕಪಿಲಾ ನದಿ ದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.ಕೇರಳದ ವಯನಾಡಿನಲ್ಲಿ ಅತ್ಯಧಿಕ ಮಳೆಯಿಂದಾಗಿ ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 40 ಸಾವಿರ, ತಾರಕ ಜಲಾಶಯದಿಂದ 9 ಸಾವಿರ, ನಗು ಜಲಾಶಯದಿಂದ 2 ಸಾವಿರ ಒಟ್ಟಾರೆ 51 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಪರಿಣಾಮವಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ, ಹದಿನಾರು ಕಾಲು ಮಂಟಪ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮುಡಿಕಟ್ಟೆಯ ಬಾಗಿಲಿನವರೆಗೂ ನೀರು ಚಾಚಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯ ವತಿಯಿಂದ ಬ್ಯಾರಿಕೇಡ್ ಗಳನ್ನು ಅಳವಡಿಸಿ ಭಕ್ತರು ನದಿಯ ಸ್ನಾನಘಟ್ಟಕ್ಕೆ ತೆರಳದಂತೆ ನಿಷೇಧ ಹೇರಲಾಗಿದೆ. ಪರಿಣಾಮವಾಗಿ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ದಾಸೋಹ ಭವನದಲ್ಲಿ ಪಕ್ಕದಲ್ಲಿರುವ ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳುವ ಸನ್ನಿವೇಶ ಎದುರಾಗಿತ್ತು.ಅಲ್ಲದೆ ಕಪಿಲಾ ನದಿಯ ಉಪನದಿಯಾದ ಗುಂಡ್ಲು ನದಿಯ ಪ್ರವಾಹದಿಂದಾಗಿ ಸಮೀಪದ ಪರಶುರಾಮ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ. ನದಿಗೆ ಇನ್ನೂ ನೀರು ಹೆಚ್ಚಾದಲ್ಲಿ ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೂ ನೀರು ನುಗ್ಗುವ ಭೀತಿ ಎದುರಾಗಿದೆ.ಹಳ್ಳದ ಕೇರಿಯ ಐದು ಮನೆಗಳು ಜಲಾವೃತಗುಂಡ್ಲು ನದಿಯ ಪ್ರವಾಹದಿಂದಾಗಿ ಪಟ್ಟಣದ ಹಳ್ಳದ ಕೇರಿಯ ಐದು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಜೊತೆಗೆ ತೋಪಿನ ಬೀದಿ, ಕುರುಬಗೇರಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿ, ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು ನಿವಾಸಿಗಳು ಆತಂಕದಲ್ಲಿದ್ದಾರೆ.ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಸುದ್ದಿಗಾರರೊಂದಿಗೆ ಮಾತನಾಡಿ, ಜನರು ಆತಂಕಗೊಳ್ಳಬೇಕಿಲ್ಲ, ತಾಲೂಕು ಆಡಳಿತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ನದಿಯ ನೀರಿನಲ್ಲಿ ಏರಿಕೆ ಕಂಡಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು. ಅಲ್ಲದೆ ನದಿ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.