ಮತ್ತೆ ಕಪಿಲಾ ನದಿಯಲ್ಲಿ ಪ್ರವಾಹ: ನಂಜುಂಡೇಶ್ವರ ಸನ್ನಿಧಿಗೂ ಬಂದ ಭಾರೀ ಪ್ರಮಾಣದ ನೀರು

| Published : Aug 01 2024, 02:01 AM IST / Updated: Aug 01 2024, 12:59 PM IST

ಸಾರಾಂಶ

ನಂಜನಗೂಡು ತಾಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಅಡಿಗೂ ಹೆಚ್ಚಿನ ನೀರು ತುಂಬಿಕೊಂಡ ಪರಿಣಾಮ 766 ರ ಊಟಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ 

 ನಂಜನಗೂಡು :  ಕೇರಳದ ವಯನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯ ಭರ್ತಿಯಾಗಿ ಕಪಿಲಾ ನದಿಗೆ 80 ಸಾವಿರಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ಯುಸೆಕ್ ನೀರು ಹರಿಯುತ್ತಿರುವ ಕಾರಣ ಕಪಿಲಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿಂದ 766ರ ಊಟಿ-ಮೈಸೂರು ಹೆದ್ದಾರಿ ಬಂದ್ ಆಗಿದೆ. ಜೊತೆಗೆ ಶ್ರೀಕಂಠೇಶ್ವರನ ಸನ್ನಿಧಿಯ ಆವರಣಕ್ಕೂ ನೀರು ತುಂಬಿಕೊಂಡಿದೆ.

ನಂಜನಗೂಡು- ಮೈಸೂರು ಹೆದ್ದಾರಿ ಬಂದ್:

ತಾಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಅಡಿಗೂ ಹೆಚ್ಚಿನ ನೀರು ತುಂಬಿಕೊಂಡ ಪರಿಣಾಮ 766 ರ ಊಟಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಇದರಿಂದ ವಾಹನ ಸವಾರಿಗೆ ತೊಂದರೆಯುಂಟಾಗಿದ್ದು. ಬದಲಿ ಮಾರ್ಗದ ಮೂಲಕ ಸಂಚಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಸುತ್ತೂರು ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆ ಸಂಚಾರಕ್ಕೆ ನಿರ್ಭಂಧ ಹೇರಲಾಗಿದೆ. ಅಲ್ಲದೆ ಪಟ್ಟಣದ ಹಳ್ಳದಕೇರಿ ಬಡಾವಣೆಯ ನಾಲ್ಕು ಮನೆಗಳು ಮುಳುಗಡೆಯಾಗಿದ್ದು. ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲೋನಿಯ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಶ್ರೀಕಂಠೇಶ್ವರನಿಗೂ ಸನ್ನಿಧಿಯ ಆವರಣಕ್ಕೂ ನೀರು:

ಕಪಿಲೆ ಉಕ್ಕಿ ಹರಿಯುತ್ತಿರುವ ಕಾರಣ ಸ್ನಾನಘಟ್ಟ, ಮುಡಿಕಟ್ಟೆ, ಹದಿನಾರು ಕಾಲು ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಗುಂಡ್ಲು ನದಿಯ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ. ಇದರಿಂದ ಶ್ರೀಕಂಠೇಶ್ವರ ದೇವಾಲಯದ ವಾಹನ ನಿಲುಗಡೆ ಪ್ರದೇಶ, ಡಾರ್ಮೆಟರಿ, ದಾಸೋಹ ಭವನದ ಸುತ್ತಲೂ ನೀರು ತುಂಬಿಕೊಂಡಿದೆ. ಅಲ್ಲದೆ ಭಕ್ತಿ ಮಾರ್ಗದಲ್ಲಿರುವ ಶಿವನ ವಿಗ್ರಹದ ಸುತ್ತಲೂ ನೀರು ತುಂಬಿಕೊಂಡು ದ್ವೀಪದಂತಾಗಿದೆ. ಸ್ನಾನಘಟ್ಟಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿರುವ ಕಾರಣ ಭಕ್ತರು ಪುಣ್ಯಸ್ನಾನ ಮಾಡಲು ಸಾಧ್ಯವಾಗದೆ. ದಾಸೋಹ ಭವನದ ಬಳಿಯಿರುವ ಕೊಳಾಯಿ ನೀರಿನಲ್ಲೇ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ನದಿಯ ಕಡೆಗೆ ತೆರಳದಂತೆ ಧ್ವನಿವರ್ಧಕದ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

ಧಾರ್ಮಿಕ ಕೇಂದ್ರಗಳು ನೀರಿನಲ್ಲಿ ಮುಳುಗಡೆ:

ಕಪಿಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಹೆಜ್ಜಿಗೆ ಸೇತುವೆ ಬಳಿ ಚಾಮರಾಜನಗರ ಬೈಪಾಸ್ ರಸ್ತೆಯವರೆಗೂ ನೀರು ಚಾಚಿಕೊಂಡಿದೆ. ತಾಲೂಕಿನ ಮಲ್ಲನಮೂಲೆಯ ಬಸವೇಶ್ವರ ದೇವಾಯ, ಮಲ್ಲನಮೂಲೆಮಠ, ಕಾಶಿ ವಿಶ್ವನಾಥ ದೇವಾಲಯ (ಲಿಂಗಾಭಟ್ಟರಗುಡಿ) ಅಯ್ಯಪ್ಪಸ್ವಾಮಿ ದೇವಾಲಯ, ಸತ್ಯನಾರಾಯಣಸ್ವಾಮಿ ದೇವಾಲಯ, ಪರಶುರಾಮ ದೇವಾಲಯಗಳು, ರಾಘವೇಂದ್ರ ಮಠದ ಪಂಚ ಬೃಂದಾವನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ತಾಲೂಕಿನ ಮಹದೇವತಾತ ಗದ್ದುಗೆಯವರೆಗೂ ಕೂಡ ನೀರು ಚಾಚಿಕೊಂಡಿದೆ.

ಪಟ್ಟಣದ ಮೇದರ ಕೇರಿ ಶಾಲೆಗೆ ಕಪಿಲಾನದಿ ನೀರು ತುಂಬಿಕೊಂಡಿರುವ ಕಾರಣ ಶಾಲೆ ಮುಳುಗಡೆಯಾಗಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ. ಜೊತೆಗೆ ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ದೇಬೂರು ಬಳಿಯಿರುವ ನೀರೆತ್ತುವ ಕೇಂದ್ರಕ್ಕೆ ನೀರು ತುಂಬಿಕೊಂಡಿರುವ ಕಾರಣ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಲ್ಲದೆ ತಾಲೂಕಿನ ಹುಲ್ಲಹಳ್ಳಿ, ಗೋಳೂರು ಗ್ರಾಮದ ನೀರೆತ್ತುವ ಕೇಂದ್ರಗಳೂ ಸಹ ಮುಳುಗಡೆಯಾಗಿವೆ. ಮಲ್ಲನಮೂಲೆಯ ಬಳಿಯ ಬಳಿಯಿರುವ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡುವ ನೀರೆತ್ತುವ ಕೇಂದ್ರವೂ ಮುಳುಗಡೆಯಾಗಿರುವ ಕಾರಣ ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಉದ್ಬವಿಸುವ ಭೀತಿ ಎದುರಾಗಿದೆ.

ತಾಲೂಕಿನಾದ್ಯಂತ ಕಪಿಲಾ ನದಿ ಹುಕ್ಕಿ ಹರಿಯುತ್ತಾ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ನದಿ ಪಾತ್ರದ ಜನರ ಜನ ಜೀವನ ಅಸ್ತವ್ಯಸ್ತಗೊಂಡಿದೆ.