ಸಾರಾಂಶ
,ರಸ್ತೆ ಸಂಪರ್ಕ ಕಡಿತ,ಧರೆಗುರುಳಿದ ಮರಗಳು,ಜನಜೀವನ ಅಸ್ತವ್ಯಸ್ತ
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ಪುಷ್ಯ ಮಳೆ ಅಬ್ಬರಕ್ಕೆ ಶನಿವಾರ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಮೂರು ದಿನಗಳಿಂದ ತಾವಿದ್ಯುತ್ ಇಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿತ್ತು,
ಶುಕ್ರವಾರ ಎಡಬಿಡದೆ ಸುರಿದ ಮಳೆಯಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳೆಲ್ಲ ಜಲಾವೃತ ಗೊಂಡಿತ್ತು. ಶ್ರೀಮಠದ ತುಂಗಾನದಿ ದಡದ ಕಪ್ಪೆಶಂಕರ ದೇಗುಲ, ಸಂಪೂರ್ಣ ಜಲಾವೃತಗೊಂಡಿತ್ತು. ಸಂಧ್ಯಾವಂದನ ಮಂಟಪಕ್ಕೂ ನೀರು ನುಗ್ಗಿತ್ತು.ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆಗೆ ನೀರು ನುಗ್ಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶೃಂಗೇರಿ ಪಟ್ಟಣ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್ ರಸ್ತೆಗೆ ನೀರು ನುಗ್ಗಿದ್ದು ರಸ್ತೆ ಸಂಪೂರ್ಣ ಜಲಾವೃವಾಗಿ ಸಂಪರ್ಕ ಕಡಿತಗೊಂಡಿತ್ತು. ಶುಕ್ರವಾರ ರಾತ್ರಿ ಗಾಂಧಿ ಮೈದಾನಕ್ಕೆ ನೀರು ನುಗ್ಗಿ ಬೆಳಿಗ್ಗೆಯೂ ಅರ್ಧ ಪ್ರದೇಶ ನೀರಿನಲ್ಲಿ ಮುಳುಗಿದ್ದರಿಂದ ಈ ಪ್ರದೇಶದಲ್ಲಿ ಪೋಲೀಸ್ ಬ್ಯಾರಿಕೇಡ್ ಅಳವಡಿಸಿ ಪ್ರವೇಶ ನಿಷೇಧಿಸಲಾಗಿದೆ.
ಕುರಬಗೇರಿ ರಸ್ತೆಯ ಮೇಲೂ ತುಂಗಾ ನದಿ ನೀರು ನುಗ್ಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ನೆಮ್ಮಾರು ಹೊಳೆಹದ್ದು ಸಂಪರ್ಕ ತೂಗುಸೇತುವೆ ಅರ್ಧಮುಳುಗಡೆ, ಗಾಂಧಿ ಮೈದಾನ ಕಲ್ಕಟ್ಟೆ ಸಂಪರ್ಕ ತೂಗುಸೇತುವೆ ಸಂಪರ್ಕ ಕಡಿತ. ಶ್ರೀಮಠದಿಂದ ನರಸಿಂಹವನಕ್ಕೆ ಹೋಗುವ ದಾರಿಗೂ ಪ್ರವಾಹ ನುಗ್ಗಿದ್ದರಿಂದ ರಸ್ತೆ ಸಂಪರ್ಕವಿಲ್ಲದಂತಾಗಿದೆ. ಇದಕ್ಕೆಲ್ಲಾ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಎಲ್ಲೆಡೆ ನೀರೇ ತುಂಬಿ ಕಳೆದ 3ದಿನಗಳಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.ಕೆರೆಕಟ್ಟೆ, ಬೇಗಾರು, ಕುಂಬೇಬೈಲು, ಕಿಗ್ಗಾ ಸೇರಿದಂತೆ ತಾಲೂಕಿನಾದ್ಯಂತ ಮಳೆ ಗಾಳಿ ಆರ್ಭಟಕ್ಕೆ ಮರಗಳು ಧರೆಗುರುಳಿ ರಸ್ತೆ, ವಿದ್ಯುತ್ ಲೈನ್ ಮೇಲೆ ಬೀಳುತ್ತಿರುವುದರಿಂದ ರಸ್ತೆ ಸಂಪರ್ಕ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಕಳೆದೆರೆಡು ದಿನಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಕಗ್ಗತ್ತಲಲ್ಲಿ ಮುಳುಗಿದೆ. ಕುಡಿಯುವ ನೀರು, ಮೊಬೈಲ್, ದೂರವಾಣಿ ಸಂಪರ್ಕ ಇಲ್ಲದೇ ಜನರು ಪರದಾಡುವಂತಾಗಿದೆ.
ಶನಿವಾರವೂ ಸಹ ಭಾರೀ ಮಳೆ, ಗಾಳಿ ಆರ್ಭಟಿಸುತ್ತಿದ್ದು ಹೊಳೆ ಹಳ್ಳಗಳು ಉಕ್ಕಿ ಹರಿಯುತ್ತದೆ. ರಾಷ್ಟ್ರೀಯ ಹೆದ್ದಾರಿ 169ರ ಶೃಂಗೇರಿ ಆನೆಗುಂದ, ತ್ಯಾವಣ, ನೆಮ್ಮಾರು, ತನಿಕೋಡು ಬಳಿ ಗುಡ್ಡಕುಸಿತ ಉಂಟಾಗುತ್ತಿದೆ. ಮಣ್ಣು ರಸ್ತೆ ಮೇಲೆ ಬೀಳುತ್ತಿದ್ದು ಅಪಾಯ ಉಂಟಾಗುತ್ತಿದೆ. ಆನೆಗುಂದ, ನೆಮ್ಮಾರು ಎಸ್ಟೇಟ್ ಗಳಲ್ಲಿ ಗುಡ್ಡದಂಚಿನಲ್ಲಿರುವ ಮನೆಗಳು ಕುಸಿದು ಬೀಳುವ ಅಪಾಯದಲ್ಲಿದೆ. ಗಾಳಿ ಅಬ್ಬರಕ್ಕೆ ಅಡಕೆ, ಬಾಳೆ ತೋಟಗಳಲ್ಲಿ ಮರಗಳು ತುಂಡಾಗಿ ಧರೆಗುರುಳಿ ಬೀಳುತ್ತಿದ್ದು ವ್ಯಾಪಕ ಹಾನಿಯುಂಟಾಗುತ್ತಿದೆ. ಕಿಗ್ಗಾ ಸಮೀಪ ಪಟ್ಟಣದ ವೆಲ್ಕಂ ಗೇಟ್ ಸಮೀಪ ಮರಗಳು ಉರುಳಿ ಬಿದ್ದಿವೆ. ಆದರೆ ಭಾರೀ ಅನಾಹುತ ತಪ್ಪಿದೆ. ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ ಎಂದಿನಂತೆ ನಡೆಯಿತು.ಶೃಂಗೇರಿ ಬೈಪಾಸ್ ರಸ್ತೆ, ಗಾಂಧಿ ಮೈದಾನಕ್ಕೂ ಪ್ರವಾಹ ನುಗ್ಗಿದ ಪರಿಣಾಮ ಪಟ್ಟಣದ ಮುಖ್ಯ ರಸ್ತೆಯಲ್ಲೇ ಎಲ್ಲಾ ವಾಹನಗಳು ಸಂಚರಿಸುವಂತಾಗಿ ಅಲ್ಲಿ ವಾಹನ ದಟ್ಟಣೆಯಿಂದ ಬೆಳಿಗ್ಗೆಯಿಂದಲೇ ಪದೇ ಪದೇ ಟ್ರಾಫಿಕ್ ಎದುರಾಗಿದೆ. ವಾಹನ ಸವಾರರು, ಪಾದಾಚಾರಿಗಳು ಹರಸಾಹಸ ಪಡುವಂತಾಗಿತ್ತು. ಶೃಂಗೇರಿ ಪಟ್ಟಣದಲ್ಲಿ ಎಲ್ಲೆಲ್ಲೂ ವಾಹನ ದಟ್ಟಣೆ ಯಿಂದ ತುಂಬಿತ್ತು.
26 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿರುವುದು.26 ಶ್ರೀ ಚಿತ್ರ 2- ಶೃಂಗೇರಿ ಪಟ್ಟಣದ ಭಾರತೀ ಬೀದಿ ಸಮೀಪ ಬೈಪಾಸ್ ರಸ್ತೆಲ್ಲಿ ತುಂಗೆಯ ಪ್ರವಾಹ26 ಶ್ರೀ ಚಿತ್ರ 3- ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ಶುಕ್ರವಾರ ತುಂಗಾ ನದಿಯ ಪ್ರವಾಹ ನುಗ್ಗಿರುವುದು.