ಸಾರಾಂಶ
ಸಿದ್ದಯ್ಯ ಹಿರೇಮಠ
ಕನ್ನಡಪ್ರಭ ವಾರ್ತೆ ಕಾಗವಾಡನೆರೆ ನಿಂತರೂ ಅದು ಮಾಡಿರುವ ಆವಾಂತರಗಳು ಮಾತ್ರ ಕಡಿಮೆಯಾಗಿಲ್ಲ. ಮನೆಯೊಳಗೆ ನದಿ ನೀರು ಹೊಕ್ಕಿದ್ದರಿಂದ ಮನೆ ಖಾಲಿ ಮಾಡಿ ಕಾಳಜಿ ಕೇಂದ್ರ, ಸುರಕ್ಷಿತ ಸ್ಥಳಗಳತ್ತ ತೆರಳಿದ್ದ ಸಂತ್ರಸ್ತರು ನದಿ ನೀರು ಇಳಿದಿದ್ದರಿಂದ ನಿಟ್ಟುಸಿರು ಬಿಟ್ಟು ಮನೆ ಸೇರಿ ನೆಮ್ಮದಿಯಿಂದ ಇರಬೇಕೆಂದು ಓಡೋಡಿ ಬಂದರೆ ಇಲ್ಲಿ ಹೊಸ ಸವಾಲು ಎದುರಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡಲಾರಂಭಿಸಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಕಾಗವಾಡ, ಅಥಣಿ, ರಾಯಭಾಗ ಹಾಗೂ ಚಿಕ್ಕೋಡಿ ತಾಲೂಕಿನ ಬಹುತೇಕ ಗ್ರಾಮಗಳ ಮನೆಗಳು ಜಲಾವೃತಗೊಂಡಿದ್ದರಿಂದ ಕೆಲ ತಗ್ಗು ಪ್ರದೇಶದಲ್ಲಿನ ಮನೆಗಳು, ಶೌಚಗೃಹ ಹಾಗೂ ಗ್ರಾಮದ ಪಕ್ಕದಲ್ಲಿ ನಿರ್ಮಿಸಿದ ಸಾಮೂಹಿಕ ಶೌಚಾಲಗಳಲ್ಲಿ ನೀರು ನಿಂತು ತ್ಯಾಜ್ಯ ತುಂಬಿಕೊಂಡಿದೆ. ಪ್ರವಾಹದಲ್ಲಿ ಸಿಲುಕಿ ಸಾವಿಗೀಡಾಗಿರುವ ನಾಯಿ, ನರಿ, ಹಂದಿ ಹಾಗೂ ಜಾನುವಾರುಗಳು ಗಿಡಗಂಟಿಗಳಲ್ಲಿ ಸಿಲುಕಿ ಕಳೆಬರಹ ಗಬ್ಬೆದ್ದು ನಾರುತ್ತಿವೆ. ಉಸಿರಾಡಲೂ ಕಷ್ಟವಾಗುವಂತಹ ಸ್ಥಿತಿಯಿದೆ. ಹೀಗಾಗಿ ನದಿತೀರದ ಗ್ರಾಮಗಳಲ್ಲೀಗ ಸಾಂಕ್ರಾಮಿಕ ರೋಗಳ ಭೀತಿ ಕಾಡಲಾರಂಭಿಸಿದೆ.ನದಿ ದಡದಲ್ಲಿರುವ ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ, ಕುಸನಾಳ, ಮೊಳವಾಡ, ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ ಅಥಣಿ ತಾಲೂಕಿನ ಹುಲಗಬಾಳ, ತೀರ್ಥ, ಸಪ್ತಸಾಗರ, ಸವದಿ, ಸತ್ತಿ ಮತ್ತಿತರ ಗ್ರಾಮಗಳ ಮನೆಯೊಳಗೆ ನೀರು ಹೊಕ್ಕಿತ್ತು. ಈಗ ಗ್ರಾಮಗಳಲ್ಲಿನ ಪರಿಸ್ಥಿತಿ ಅಯೋಮಯವಾಗಿದೆ.
ಮನೆಯೊಳಗೆ ದುರ್ನಾತ;ಪ್ರವಾಹ ತಗ್ಗಿದ ಬಳಿಕ ಸಂತ್ರಸ್ತರು ಮನೆಗಳನ್ನು ಸುಚಿಗೊಳಿಸುವ ಕಾರ್ಯ ಕೈಗೊಂಡಿದ್ದು, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಶೌಚ ತುಂಬಿದ ಕೋಣೆಯಿಂದ ದುರ್ನಾತ ಬರುತ್ತಿದೆ. ಮನೆಯೊಳಗೆ ಕೂಡಿಟ್ಟ ಕಾಳು-ಕಡಿ, ಹಿಟ್ಟು ಸೇರಿ ಧವಸ ದಾನ್ಯಗಳು ನೀರಲ್ಲಿ ನೆನೆದು ಗಬ್ಬೆದ್ದು ನಾರುತ್ತಿದ್ದು, ಅತ್ತ ಕಡೆ ಸುಳಿಯಲೂ ಆಗುತ್ತಿಲ್ಲ.
ನದಿಗೆ ತ್ಯಾಜ್ಯ;ಮನೆಯೊಳಗೆ ನೀರು ನುಗ್ಗಿ ತೊಯ್ದ ನಾರುತ್ತಿರುವ ಹಾಸಿಗೆ, ಹೊದಿಕೆ, ಮಂಚ, ಪ್ಲಾಸ್ಟಿಕ್, ಬಟ್ಟೆ, ಮತ್ತಿತರ ವಸ್ತುಗಳನ್ನು ಜನರು ನದಿಗೆ ಎಸೆಯುತ್ತಿದ್ದು, ಇದರಿಂದ ಕೃಷ್ಣಾ ನದಿ ಮತ್ತಷ್ಟು ಕಲುಷಿತವಾಗುತ್ತಿದೆ. ಗ್ರಾಮ ಪಂಚಾಯತಿ ವತಿಯಿಂದ ಬ್ಲೀಚಿಂಗ್ ಪಾವಡರ್ ಹಾಕುತ್ತಿದ್ದರೂ ನದಿ ದಡದಲ್ಲಿನ ದುರ್ವಾಸನೆ ಮಾತ್ರ ಕಡಿಮೆಯಾಗುತ್ತಿಲ್ಲ. ಪೂಜಾ ಕಾರ್ಯ ನೆರವೇರಿಸಿ ಎಡೆಯ ನದಿಯಲ್ಲಿ ತೆಪ್ಪವನ್ನು ಬಿಟ್ಟು ಹೋಗಿರುವುದರಿಂದ ಗಬ್ಬೆದ್ದು ನಾರುತ್ತಿದೆ.
ಇನ್ನು ಮಹಾರಾಷ್ಟ್ರದ ಮಿರಜ್, ಸಾಂಗಲಿ, ಕೊಲ್ಲಾಪುರ ನಗರ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಕರ್ನಾಟಕದಕ್ಕಿಂತಲೂ ಹೆಚ್ಚಿನ ಅನಾಹುತಗಳಾಗಿವೆ. ಆ ನಗರ ಪ್ರದೇಶದಲ್ಲಿ ನಿಂತ ತ್ಯಾಜ್ಯನ್ನು ಜೆಸಿಬಿ ಮೂಲಕ ಕೃಷ್ಣೆಗೆ ಹಾಕುತ್ತಿದ್ದು, ಚಿಕ್ಕ ನದಿಯಂತೆ ತ್ಯಾಜ್ಯ ಕೃಷ್ಣೆಗೆ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ದುರ್ವಾಸನೆ ಹೆಚ್ಚುತ್ತಿದೆ.ಸ್ನಾನಕ್ಕೂ ಯೋಗ್ಯವಿಲ್ಲ ನದಿ ನೀರು:
ನೆರೆಯ ಮಹಾರಾಷ್ಟ್ರದ ವಿವಿಧ ಪಟ್ಟಣಗಳಿಂದ ಹರಿದು ಬರುವ ರಾಸಾಯನಿಕ ಮಿಶ್ರಿತ ತ್ಯಾಜ್ಯದಿಂದ ಕೃಷ್ಣಾ ನೀರು ಮಲೀನವಾಗಿದ್ದು, ಈ ನೀರಲ್ಲಿ ಸ್ನಾನ ಮಾಡಿದರೆ ಇನ್ಪೆಕ್ಷನ್ ಆಗಿ ಮೈಮೇಲೆ ಸೂಕ್ಷ್ಮವಾದ ಗುಳ್ಳೆಗಳು ಎದ್ದು ಮೈಯೆಲ್ಲ ತುರಿಕೆ ಕಾಣಿಸಿಕೊಳ್ಳುತ್ತಿದೆ.ಸಾಂಕ್ರಾಮಿಕ ರೋಗದ ಭೀತಿ;
ಕೃಷ್ಣಾ ನದಿಯ ಪ್ರವಾಹದಿಂದ ಜಲಾವೃತಗೊಂಡ ಗ್ರಾಮಗಳಲ್ಲೀಗ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಮುನ್ನೆಚ್ಚರಿಕೆಯಾಗಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಸಂತ್ರಸ್ತರ ಆರೋಗ್ಯ ತಪಾಸನೆ ಮಾಡಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.