ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಸ್ವರ್ಣಸಂದ್ರ ಸುಧೀರ್‌ ಪಾರ್ಕ್‌ನಲ್ಲಿ 27ನೇ ಕಾರ್ಗಿಲ್‌ ವಿಜಯೋತ್ಸವವನ್ನು ಆಚರಿಸಲಾಯಿತು.

ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಜಯ ಕರ್ನಾಟಕ ಸಂಘಟನೆ ಹಾಗೂ ಜೈ ಕರ್ನಾಟಕ ಪರಿಷತ್‌, ರೋಟರಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರ ಯೋಧರಾದ ಶರತ್‌ ಮತ್ತು ಸುಧೀರ್‌ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಯಿತು.

ಪ್ಯಾರಾ ಮಿಲಿಟರಿ ಸಂಘದ ಗೌರವಾಧ್ಯಕ್ಷ ಎನ್‌.ರಮೇಶ್‌ ಮಾತನಾಡಿ, ಇಂದು ಭಾರತ ಸಮೃದ್ಧಿಯಾಗಿ ನಮ್ಮ ಸೈನ್ಯದ ಶಕ್ತಿ ಹೆಚ್ಚಿದೆ. ಶಕ್ತಿಯುತವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ ಎಂದು ಶ್ಲಾಘಿಸಿದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, 27ನೇ ಕಾರ್ಗಿಲ್‌ ವಿಜಯೋತ್ಸವದಲ್ಲಿ ಮಾಜಿ ಹಾಗೂ ಹಾಲಿ ಸೈನಿಕರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ನಮ್ಮ ದೇಶದ ಗಡಿಯಲ್ಲಿ ನಮ್ಮ ಸೈನಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂದು ಶ್ಲಾಘಿಸಿದರು.


ಜೈ ಕರ್ನಾಟಕ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಎಸ್‌.ನಾರಾಯಣ್‌ ಮಾತನಾಡಿ, 18 ಸಾವಿರದ ಅಡಿ ಎತ್ತರದಲ್ಲಿ ನಿಂತುಕೊಂಡು ನಮ್ಮ ಬದ್ಧ ವೈರಿಗಳು ನಮ್ಮ ಸೈನಿಕರ ಮೇಲೆ ದಾಳಿಗೆ ಮುಂದಾಗಿದ್ದರು. ಅಂತಹ ಸಂದರ್ಭದಲ್ಲಿ ನಮ್ಮ ಯೋಧರು ಧೃತಿಗೆಡದೆ ಅವರನ್ನು ಧ್ವಂಸ ಮಾಡಿ ನಮಗೆ ಕಾರ್ಗಿಲ್‌ ಗೆಲುವು ತಂದುಕೊಟ್ಟರು ಎಂದರು.

ಕಾರ್ಯಕ್ರಮದಲ್ಲಿ ಪ್ಯಾರಾ ಮಿಲಿಟರಿ ಸಂಘದ ಅಧ್ಯಕ್ಷ ಚಲುವಯ್ಯ, ಮಾಜಿ ಸೈನಿಕರಾದ ರವಿಕುಮಾರ್‌, ಮಲ್ಲರಾಜು, ರಮೇಶ್‌, ನಾಗೇಶ್‌, ರಾಜಣ್ಣ, ಉದಯ್‌ ಅಶ್ವತ್‌, ಮುಖಂಡರಾದ ಜೀವಧಾರೆ ನಟರಾಜ್‌, ಗೌತಮ್‌, ರವೀಂದ್ರ, ಚಂದ್ರು, ಪುಟ್ಟಸ್ವಾಮಿ, ತನುಜಾ, ಪುಟ್ಟಮ್ಮ, ವರಲಕ್ಷ್ಮಿ ಭಾಗವಹಿಸಿದ್ದರು.