ಮಾರ್ಗಶಿರ ಶುದ್ಧ ನವಮಿ ದಿನದ ಶನಿವಾರ ರಾತ್ರಿ ಸಂಭ್ರಮದಿಂದ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಜರುಗಿತು.

ಕಂಪ್ಲಿ: ಪಟ್ಟಣದ ಆರಾಧ್ಯ ದೈವ ಶ್ರೀಪೇಟೆ ಬಸವೇಶ್ವರ ಹಾಗೂ ನೀಲಮ್ಮ ದೇವಿಯ ಜೋಡಿ ರಥೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ನವಮಿ ದಿನದ ಶನಿವಾರ ರಾತ್ರಿ ಸಂಭ್ರಮದಿಂದ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಜರುಗಿತು.

ಬೆಳಗ್ಗೆ ದೇವಸ್ಥಾನದಲ್ಲಿ ವೈದಿಕ ಮಂತ್ರೋಚ್ಚಾರಣೆಯ ಮೂಲಕ ಸಾಂಪ್ರದಾಯಿಕ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ವಿಧಿ-ವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಅನಂತರ ತುಂಗಭದ್ರಾ ನದಿತಟದಿಂದ ಆರಂಭವಾದ ‘ಗಂಗೆಸ್ಥಳ ಮೆರವಣಿಗೆ’ ದೈವ ಸಂಪ್ರದಾಯಗಳ ಸೊಬಗು ಮೆರೆಯಿತು. ರಾತ್ರಿ ವೇಳೆ ಜರುಗಿದ ಹೂವಿನ ಅಡ್ಡಪಲ್ಲಕ್ಕಿ ಉತ್ಸವವು ಭಕ್ತರ ಕಣ್ಣಿಗೆ ಹಬ್ಬವಾಗಿತ್ತು. ಸಾವಿರಾರು ಬಣ್ಣ ಬಣ್ಣದ ಹೂವಿನಿಂದ ಅಲಂಕರಿಸಲಾದ ಶಿವ-ಬಸವೇಶ್ವರನ ಮೂರ್ತಿ ಹೊತ್ತ ಅಡ್ಡಪಲ್ಲಕ್ಕಿ ವಿದ್ಯುತ್ ದೀಪಗಳು ಜನರನ್ನು ಆಕರ್ಷಿಸಿತು. ಉತ್ಸವದ ಭಾಗವಾಗಿ ನಡೆದ ಡೊಳ್ಳು ಕುಣಿತ, ನಂದಿ ಕೋಲು, ತಾಷಾ, ರಾಮ್‌ಡೋಲ್ ಮುಂತಾದ ಸಾಂಸ್ಕೃತಿಕ ಕಲಾರೂಪಗಳು ಸಮಾರಂಭದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದವು. ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವ ಡಾ. ರಾಜಕುಮಾರ್ ರಸ್ತೆ, ನಡುವಲ ಮಸೀದಿ, ಗಂಗಾನಗರ, ಉದ್ಭವ ಮಹಾ ಗಣಪತಿ ದೇವಸ್ಥಾನದ ಮಾರ್ಗವಾಗಿ ಸಂಚರಿಸಿ ದೇವಸ್ಥಾನದ ಬಳಿ ಸಮಾವೇಶಗೊಂಡಿತು. ಉತ್ಸವದಲ್ಲಿ ಭಕ್ತರು ಶ್ರೀ ಪೇಟೆ ಬಸವೇಶ್ವರನಿಗೆ ಜಯಘೋಷ ಕೂಗುತ್ತ ಭಕ್ತಿ ಸಮರ್ಪಿಸಿದರು.