ಹೂವಿನ ವ್ಯಾಪಾರಿ ಕೊಲೆ ಪ್ರಕರಣ: ನಾಲ್ಕು ಜನರ ಬಂಧನ

| Published : Dec 27 2023, 01:32 AM IST

ಹೂವಿನ ವ್ಯಾಪಾರಿ ಕೊಲೆ ಪ್ರಕರಣ: ನಾಲ್ಕು ಜನರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಂಗಿಗೆ ಚುಡಾಯಿಸಿದ್ದಾನೆಂದು ಕೋಪಗೊಂಡ ಅಣ್ಣನಿಂದ ವ್ಯಕ್ತಿಯ ತಲೆಮೇಲೆ ಕಲ್ಲು ಎತ್ತಾಕಿ ಬರ್ಬರ ಕೊಲೆ ಮಾಡಿದ್ದ ಆರೋಪಿಗಳನ್ನು ಪ್ರಕರಣ ದಾಖಲಿಸಿಕೊಂಡ ೪೮ ಗಂಟೆಯಲ್ಲೇ ಬಂಧಿಸಿದ ಪೊಲೀಸರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪಟ್ಟಣದ ಆಶ್ರಯ ಕಾಲೋನಿಯ ಅರಣ್ಯ ಇಲಾಖೆಯ ಹತ್ತಿರ ಡಿ.೨೩ರಂದು ಹೂವಿನ ವ್ಯಾಪಾರ ಮಾಡುತ್ತಿದ್ದ ದಾವಲಸಾಬ ಮಹ್ಮದ್‌ ಶರೀಫ್ ಕೊಲೆ ಪ್ರಕರಣವನ್ನು ೪೮ ಗಂಟೆಯಲ್ಲಿ ಭೆದಿಸಿ ಕೊಲೆಯಲ್ಲಿ ಭಾಗಿಯಾಗಿದ್ದ ೪ ಜನ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ತಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ದಾವಲಸಾಬ ಹಾಗೂ ಕೊಲೆ ಮಾಡಿರುವ ಆರೊಪಿಗಳು ಗೆಳೆಯರಾಗಿದ್ದು ಆರೊಪಿ ಆಸೀಫ್ ಇತನ ತಂಗಿಗೆ ಮೃತ ದಾವಲಸಾಬ ಚುಡಾಯಿಸುವುದು, ನೋಡುವುದು, ಮಾತನಾಡಿಸುವುದು ಮಾಡುತ್ತಿದ್ದು ಈ ಕುರಿತು ಹಲವು ಬಾರಿ ಬುದ್ಧಿವಾದ ಹೇಳಿದರೂ ಸಹ ಆತನು ಅದೇ ಚಾಳಿ ಮುಂದುವರೆಸಿದ್ದರಿಂದ ಅದೇ ವೈಮನಸಿನಿಂದ ಆರೊಪಿತರೆಲ್ಲರೂ ಸೇರಿ ಕೊಲೆ ಮಾಡುವ ಉದ್ದೇಶದಿಂದ ದಾವಲಸಾಬ ಜೊತೆ ಮದ್ಯಪಾನ ಮಾಡಿ ತಲೆಯ ಮೇಲೆ ಪರ್ಸಿಕಲ್ಲಿನಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಸಿಗದಂತೆ ಪೆಟ್ರೋಲ್‌ನಿಂದ ಬೆಂಕಿ ಹಚ್ಚಿದ್ದಾರೆ. ಆದರೆ ದೇಹವು ಪೂರ್ತಿ ಸುಡದೇ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಮೃತ ದಾವಲ್ ಸಾಬ್ ತಾಯಿ ಖಾಜಾಬೀ ಮಹ್ಮದ ಶರೀಫ್ ಅವರು ಕೊಟ್ಟ ದೂರಿನ ಆಧಾರದ ಮೇಲೆ ಗುನ್ನೆ ೧೫೯/೨೦೨೩ ಕಲಂ ೩೦೨,೨೦೧ ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಡ್ಡೂರ ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ಶಹಬಾದ ಉಪವಿಭಾಗದ ಡಿವೈಎಸ್‌ಪಿ ಶೀಲವಂತ ಹೆಚ್ಚ ಅವರ ನೇತೃತ್ವದಲ್ಲಿ ಚಿತ್ತಾಪುರ ವೃತ್ತದ ಸಿಪಿಐ ಚಂದ್ರಶೇಖರ ತಿಗಡಿ ಮತ್ತು ಪಿಎಸ್‌ಐ ಶ್ರೀಶೈಲ ಅಂಬಾಟಿ ಹಾಗೂ ಸಿಬ್ಬಂದಿ ಲಾಲ ಅಹ್ಮದ, ಚಂದ್ರಶೇಖರ, ನಾಗೇಂದ್ರ, ರಾಜಕುಮಾರ, ಷಣ್ಮುಖ, ವೀರಭದ್ರ, ಮಂಜುನಾಥ, ಹುಸೇನ ಪಾಶಾ, ಮುಕ್ತುಂ ಪಟೇಲ್, ಅಯ್ಯಣ್ಣ, ಬಲರಾಮ ಅವರನ್ನೊಳಗೊಂಡ ತಂಡವನ್ನು ರಚಿಸಿಕೊಂಡು ೪೮ ಗಂಟೆಯಲ್ಲಿಯೇ ಕೊಲೆ ಆರೊಪಿಗಳಾದ ಆಸೀಪ್ ಪಾಶಾ ಸೈಯದ್ ಪಾಶಾ, ಬಾಬುಮಿಯ್ಯ ಮೆಹಬೂಬ ಕೊಟಿ, ಅಲ್ತಾಫಶಾ ಗುಲಾಮಶಾ, ಮಹ್ಮದ ಕೈಫ್ ಶೇಖ ಸಲೀಮ್ ಮಾಸೂಲದಾರ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.