ಲಾಲ್‌ಬಾಗ್‌ಗೆ ಕುವೆಂಪು ಅವರ ಪುತ್ರಿ ತಾರಿಣಿ, ಅಳಿಯ ಚಿದಾನಂದಗೌಡ ಸೇರಿದಂತೆ ಕುಟುಂಬಸ್ಥರು ಆಗಮಿಸಿ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಸೇರಿದಂತೆ ಇತರರು ಇದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. ಇದೇ ಮೊದಲ ಬಾರಿಗೆ ಜನವರಿಯ ಪುಷ್ಪ ಪ್ರದರ್ಶನದಲ್ಲಿ 2.74 ಕೋಟಿ ರು.ಗಳಿಗೂ ಅಧಿಕ ಮೊತ್ತ ಮಳಿಗೆಗಳು ಮತ್ತು ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿರುವುದು ದಾಖಲೆ.

ಕೊನೆಯ ದಿನವಾದ ಸೋಮವಾರ ರಜಾದಿನವಾಗಿದ್ದು ನಿರೀಕ್ಷೆ ಮೀರಿ ಜನಸಾಗರವೇ ಹರಿದು ಬಂದಿತ್ತು. ಪುಷ್ಪ ಸೊಬಗನ್ನು ವೀಕ್ಷಿಸಲು ನಗರದ ನಾನಾ ಭಾಗಗಳಿಂದ ಮಾತ್ರವಲ್ಲದೆ, ರಾಜ್ಯದ ಹೊರ ಭಾಗಗಳಿಂದಲೂ ಜನರು ಆಗಮಿಸಿದ್ದರು. ಒಂದೇ ದಿನ 1.90 ಲಕ್ಷ ಜನರು ಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 65 ಲಕ್ಷ ರು.ಗಳಿಗಿಂತ ಹೆಚ್ಚು ಮೊತ್ತ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಹಿರಿಯ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಬರಹದ ಕುರಿತ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಮೋಡದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಮಳೆಯ ಆಗಮನವಾಯಿತು. ಆದರೆ ಮಳೆಯ ನಡುವೆಯೂ ಜನ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದು ವಿಶೇಷ. ಉದ್ಯಾನದ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣವಿತ್ತು. ಟಿಕೆಟ್ ಕೌಂಟರ್‌ಗಳಲ್ಲಿ ಜನಜಂಗುಳಿಯಿದ್ದರೆ, ಹೊರ ಭಾಗದಲ್ಲಿ ಪಾನೀಯ, ತಿಂಡಿಗಳು ಹಾಗೂ ಆಟಿಕೆಗಳದ್ದೇ ಕಾರುಬಾರು.

ಜನಸಾಗರ-ನೂಕುನುಗ್ಗಲು

ಗಾಜಿನ ಮನೆಯಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಹೂವುಗಳನ್ನು ನೋಡುವುದಕ್ಕಿಂತ ಫೋಟೊ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು. ಇನ್ನು ಬಂಡೆ ಮೇಲೆ, ಕೆರೆ ಏರಿ ಮೇಲೆ, ಬೋನ್ಸಾಯ್ ಗಾರ್ಡನ್, ತರಕಾರಿ ಗಾರ್ಡನ್, ಮಾರಾಟ ಮಳಿಗೆಗಳ ಬಳಿ ಜನ ನೆರೆದಿದ್ದರು. ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿದ ವಿದ್ಯಾರ್ಥಿಗಳು ನೇರ ಲಾಲ್‌ಬಾಗ್‌ಗೆ ಬಂದಿದ್ದರು.

ಹಾಪ್‌ಕಾಮ್ಸ್ ಪ್ರಧಾನ ಕಚೇರಿ ಆವರಣ, ಡಬ್ಬಲ್ ರೋಡ್ ಗೇಟ್ ಸಮೀಪದಲ್ಲಿರುವ ನರ್ಸರಿ ಆವರಣಗಳಲ್ಲಿ ವಾಹನಗಳಿಗೆ ಶುಲ್ಕ ಪಡೆದು ನಿಲುಗಡೆಗೆ ವಿಶೇಷವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಲ್ಲದೆ ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ.ರಸ್ತೆಯಲ್ಲಿರುವ ಬಿಬಿಎಂಪಿ ವಾಣಿಜ್ಯ ಸಂಕೀರ್ಣಗಳಲ್ಲೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದಾಗ್ಯೂ ಬಹುತೇಕ ವಾಹನ ಸವಾರರು ಉದ್ಯಾನದ ಸುತ್ತಲಿನ ರಸ್ತೆಯಂಚುಗಳಲ್ಲೇ ವಾಹನಗಳನ್ನು ನಿಲ್ಲಿಸಿದ್ದರು. ಹೀಗಾಗಿ ಲಾಲ್ ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಉತ್ತಮ ಸ್ಪಂದನೆ

ಸಾಮಾನ್ಯವಾಗಿ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಖರ್ಚು ಮಾಡಿದ ಹಣದಲ್ಲಿ ಮುಕ್ಕಾಲು ಭಾಗವೂ ಬರುತ್ತಿರಲಿಲ್ಲ. ಆದರೆ ಈ ಬಾರಿ ಈ ಹಿಂದಿನ ಜನವರಿ ಪುಷ್ಪ ಪ್ರದರ್ಶನದ ಎಲ್ಲ ದಾಖಲೆ ಮೀರಿ ಟಿಕೆಟ್‌ ಮಾರಾಟ ಮತ್ತು ಮಳಿಗೆಗಳ ಬಾಡಿಗೆಯಿಂದ ₹2.85 ಕೋಟಿ ಗಳಷ್ಟು ಸಂಗ್ರಹವಾಗಿದೆ. ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿದ್ದು ಎಲ್ಲರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

-ಡಾ.ಎಂ.ಜಗದೀಶ್, ಅಪರ ನಿರ್ದೇಶಕರು, ತೋಟಗಾರಿಕೆ ಇಲಾಖೆ