ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಶ್ವೇತ ವೈಭವ

| Published : Mar 04 2025, 12:34 AM IST

ಸಾರಾಂಶ

ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ತಮ್ಮ ತೋಟಕ್ಕೆ ನೀರು ಹಾಯಿಸಿ ಕಾಫಿ ಹೂ ಅರಳಿಸುವತ್ತ ಗಮನ ಹರಿಸಿದ್ದಾರೆ. ಹೂವುಗಳು ಅರಳಿ ಶ್ವೇತ ವೈಭವದಿಂದ ಕಂಗೊಳಿಸುತ್ತಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ತಮ್ಮ ತೋಟಕ್ಕೆ ನೀರು ಹಾಯಿಸಿ ಕಾಫಿ ಹೂ ಅರಳಿಸುವತ್ತ ಗಮನಹರಿಸಿದ್ದಾರೆ.

ಇದೀಗ ಕಾಫಿಯ ಹೂಗಳು ಅರಳುವ ಸಮಯ ವಾಗಿರುವುದರಿಂದ. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಅಲ್ಲಲ್ಲಿ ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಶ್ವೇತ ವೈಭವದಿಂದ ಕಂಗೊಳಿಸುತ್ತಿವೆ.

ಬಹುತೇಕ ತೋಟಗಳಲ್ಲಿ ಕಾಫಿ ಕೊಯ್ಲು ಪೂರೈಸಿದ್ದು ಇದೀಗ ಮುಂದಿನ ವರ್ಷದ ಇಳುವರಿಗಾಗಿ ಮೊಗ್ಗುಗಳು ಸಿದ್ಧವಾಗಿವೆ. ಮಳೆಗಾಗಿ ಕಾತರಿಸುತ್ತಿವೆ. ನೀರಿನ ಮೂಲ ಉಳ್ಳವರು ಕೆರೆಯಿಂದ, ತೋಡುಗಳಿಂದ, ಹೊಳೆಗಳಿಂದ ನೀರು ಹಾಯಿಸಿ ಹೂ ಅರಳಿಸುವ ಪ್ರಯತ್ನ ಪಡುತ್ತಿದ್ದಾರೆ.

ಉರಿಬಿಸಿಲಿನ ಧಗೆಯ ಪ್ರಮಾಣ ಏರುತ್ತಿದ್ದು ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಮಳೆಗಾಗಿ ಕಾತರಿಸುತ್ತಿದ್ದಾರೆ. ಅಲ್ಲಲ್ಲಿ ದಟ್ಟನೆಯ ಮೋಡಗಳು ಆವರಿಸುವ ದೃಶ್ಯಗಳು ಕಂಡುಬಂದರೂ ಎಲ್ಲೂ ಮಳೆಯಾಗಿಲ್ಲ ವಾರದ ಹಿಂದೆ ಕಕ್ಕಬ್ಬೆ ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು ಬೆಳೆಗಾರರಿಗೆ ಆಶಾಭಾವನೆ ಮೂಡಿಸಿದೆ.

ಸಾಮಾನ್ಯವಾಗಿ ಫೆಬ್ರುವರಿ ಕೊನೆ ವಾರ ಮಾರ್ಚ್ ತಿಂಗಳಲ್ಲಿ ಮೊದಲ ಮಳೆ ಬರುವುದು ವಾಡಿಕೆ. ಇದು ಕಾಫಿ ಹೂವು ಅರಳಿಸಲು ಸಹಕಾರಿ. ಇತ್ತೀಚೆಗೆ ಹೂಮಳೆ ಸರಿಯಾಗಿ ಆಗುತ್ತಿಲ್ಲ ಉಷ್ಣಾಂಶವು ಏರಿದೆ. ಹಾಗಾಗಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬೆಳೆಗಾರರು.

ಕಳೆದ ವರ್ಷದ ಹೆಚ್ಚಿನ ತಾಪಮಾನದಿಂದಾಗಿ ಈ ವರ್ಷ ಬಹುತೇಕ ಬೆಳೆಗಾರರಿಗೆ ಕಾಫಿ ಇಳುವರಿ ಕಡಿಮೆಯಾಗಿದೆ. ಮುಂದಿನ ವರ್ಷ ಉತ್ತಮ ಬೆಳೆ ತೆಗೆಯುವ ನಿರೀಕ್ಷೆ ಬೆಳೆಗಾರರದ್ದು. ಇದಕ್ಕಾಗಿ ಈಗ ಅರಳುವ ಹೂಗಳು ಮುಂದಿನ ಇಳುವರಿಯ ದಿಕ್ಸೂಚಿಯಾಗಿದೆ. ಬೆಳೆಗಾರರು ಹೂವಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.