ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿದೂಗಿಸುವುದಕ್ಕಾಗಿ ಅಧಿಕಾರಿಗಳು ಕೊಳವೆಬಾವಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಆ ನೀರಿನಲ್ಲಿ ವ್ಯಾಪಕ ಫ್ಲೋರೈಡ್ ಇದೆ.
ಶಿವಕುಮಾರ ಕುಷ್ಟಗಿ
ಗದಗ: ಅವಳಿ ನಗರದ ಜನತೆಗೆ ಕುಡಿಯುವ ನೀರು ಎನ್ನುವುದು ಕೇವಲ ಮೂಲ ಸೌಕರ್ಯವಲ್ಲ, ಅದೊಂದು ಐಷಾರಾಮಿ ವಸ್ತುವಾಗಿ ಮಾರ್ಪಟ್ಟಿದೆ. ಒಂದು ಹನಿ ಸಿಹಿ ನೀರಿಗಾಗಿ ಇಲ್ಲಿನ ಜನರು ಹಲವಾರು ದಶಕಗಳಿಂದ ಪರದಾಡುತ್ತಿದ್ದಾರೆ. ಅವಳಿ ನಗರದ ಜನರು ಅನಿವಾರ್ಯವಾಗಿ ನಿಧಾನಗತಿಯ ವಿಷ ಎನ್ನಲಾಗುವ ಫ್ಲೋರೈಡ್ ಯುಕ್ತ ನೀರನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.ತುಂಗಭದ್ರಾ ನದಿಯಿಂದ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಮಾಡಲು 2ನೇ ಹಂತದ ಯೋಜನೆ ಸರ್ಕಾರಿ ದಾಖಲೆಗಳಲ್ಲಿ 2018ರಲ್ಲಿಯೇ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಆದರೆ ಇದುವರೆಗೂ ಸಾರ್ವಜನಿಕರಿಗೆ ತುಂಗಭದ್ರಾ ನದಿ ಮೂಲದ ಸಿಹಿ ನೀರು ಎನ್ನುವುದು ಗಗನಕುಸುಮವಾಗಿದೆ.
ಸರ್ವಕಾಲದ ಸಮಸ್ಯೆ: ತುಂಗಭದ್ರಾ ನದಿಯಿಂದ ನೀರು ಸಂಗ್ರಹಿಸಿ ಪೂರೈಕೆಗೆ ಯೋಜನೆ ಇದ್ದರೂ ಅನುಷ್ಠಾನದಲ್ಲಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ, ಚುನಾಯಿತ ಪ್ರತಿನಿಧಿಗಳ ಅಸಡ್ಡೆಯಿಂದಾಗಿ ಜನರಿಗೆ ಸಿಹಿ ನೀರು ಎನ್ನುವುದು ಸರ್ವಕಾಲದ ಸಮಸ್ಯೆಯಾಗಿ ಮಾರ್ಪಟ್ಟಿದೆ. ನೀರಿನ ಸಮಸ್ಯೆ ಉಲ್ಬಣಿಸುವುದು ಸಾಮಾನ್ಯವಾಗಿ ಬೇಸಿಗೆಯಲ್ಲಿ. ಆದರೆ, ಅವಳಿ ನಗರದಲ್ಲಿ ಮಾತ್ರ ಅದು ಸರ್ವಕಾಲದ ಸಮಸ್ಯೆಯಾಗಿದ್ದು, ಮಳೆಗಾಲದಲ್ಲಿಯೇ 15ರಿಂದ 20 ದಿನಗಳಿಗೊಮ್ಮೆ ತುಂಗಭದ್ರಾ ನೀರು ಪೂರೈಕೆಯಾಗುತ್ತಿದೆ.834 ಕೊಳವೆ ಬಾವಿಗಳಿವೆ: ಅವಳಿ ನಗರದಲ್ಲಿ ಉಂಟಾಗುತ್ತಿರುವ ನೀರಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 834 ಕೊಳವೆ ಬಾವಿಗಳಲ್ಲಿ 162 ಸಂಪೂರ್ಣ ಸ್ಥಗಿತಗೊಂಡಿವೆ.(ನಿರ್ವಹಣೆ ಕೊರತೆ ಹಾಗೂ ಬೇರೆ ಬೇರೆ ಕಾರಣಗಳಿಂದ) 672 ಕೊಳವೆಬಾವಿಗಳು ಚಾಲ್ತಿಯಲ್ಲಿದ್ದು, ಅವುಗಳಲ್ಲಿ 300ಕ್ಕೂ ಹೆಚ್ಚು ಫ್ಲೋರೈಡ್ ಯುಕ್ತವಾಗಿವೆ. 672 ಬಾವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬಾವಿಗಳು ವಿಷಕಾರಿ ಫ್ಲೋರೈಡ್ ಅಂಶದಿಂದ ಕೂಡಿವೆ.
ಅಧಿಕಾರಿಗಳ ತಪ್ಪು ನಡೆ: ನಗರದ 35 ವಾರ್ಡ್‌ಗಳ ಪೈಕಿ 13ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಸಮಸ್ಯೆ ಗಂಭೀರವಾಗಿದೆ. ಈ ಹಿಂದೆ ಲೇಔಟ್ ಮಾಲೀಕರು ಅರೆಬರೆ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ನಗರಸಭೆ ಹಸ್ತಾಂತರಿಸಿಕೊಂಡಿದೆ.(ಸ್ವೀಕರಿಸಿದೆ) ಆದರೆ, ಇಂದು ಅಲ್ಲಿನ ನಿವಾಸಿಗಳಿಗೆ ತುಂಗಭದ್ರಾ ನದಿಯ ಸಿಹಿ ನೀರು ಲಭ್ಯವಿಲ್ಲ. ಕಾರಣ ಅಂದಿನ ಮಾಲೀಕರು ನೀರು ಪೂರೈಕೆ ಮಾಡಲು ನಗರಸಭೆಗೆ ಭರಿಸಬೇಕಾದ ಅನುದಾನವನ್ನು ಕಟ್ಟದೇ ಇದ್ದರೂ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ.ಗಂಭೀರ ಸಮಸ್ಯೆ ಸೃಷ್ಟಿ: ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿದೂಗಿಸುವುದಕ್ಕಾಗಿ ಅಧಿಕಾರಿಗಳು ಕೊಳವೆಬಾವಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಆ ನೀರಿನಲ್ಲಿ ವ್ಯಾಪಕ ಫ್ಲೋರೈಡ್ ಇದೆ. (ಕೆಲವೆಡೆ ಟಿಡಿಎಸ್ 3500ಕ್ಕೂ ಅಧಿಕ ಇದೆ) ಇನ್ನು ಅವಳಿ ನಗರದ 50 ಸಾವಿರಕ್ಕೂ ಅಧಿಕ ಮನೆಗಳಲ್ಲಿ (ಸ್ವಂತ ಕೊಳವೆಬಾವಿಗಳನ್ನು) ಹೊಂದಿದ್ದು, ಆ ನೀರು ಕೂಡಾ ಅತಿಯಾದ ಪ್ಲೋರೈಡ್ ಅಂಶ ಹೊಂದಿದೆ. ಇದರಿಂದಾಗಿ ಕುಡಿಯಲು ಮಾತ್ರ ಶುದ್ಧ ಘಟಕಗಳಿಂದ ನೀರು ತರುತ್ತಾರೆ. ಇದೇ ಪ್ಲೋರೈಡ್ ಯುಕ್ತ ನೀರನ್ನು ನಿತ್ಯವೂ ಬಳಕೆ ಮಾಡುವುದರಿಂದಾಗಿ ಮಕ್ಕಳಲ್ಲಿ ಬಾಲನೆರೆ (ಬಿಳಿಕೂದಲು) ಚರ್ಮದಲ್ಲಿ ತುರಿಕೆ ಸೃಷ್ಟಿಯಾಗುತ್ತಿದ್ದು, ಅದರಲ್ಲಿಯೂ ಬಾಲಕಿಯರಲ್ಲಿ ಬೇಗನೇ ಬಿಳಿ ಕೂದಲಿನ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ ಎನ್ನುತ್ತಾರೆ ಅವಳಿ ನಗರದ ಚರ್ಮರೋಗ ತಜ್ಞರು.
ಟ್ಯಾಂಕರ್ ನೀರು: ಮನೆಯಲ್ಲಿರುವ ಕೊಳವೆಬಾವಿಯ ನೀರಿನಲ್ಲಿ ಫ್ಲೋರೈಡ್ ಇದ್ದು, ಅದು ಬಳಕೆಗೆ ಬರುವುದಿಲ್ಲ. ನಗರಸಭೆಯ ಸಿಹಿ ನೀರು ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಜನಸಾಮಾನ್ಯರ ಬಳಕೆಗೆ ಫ್ಲೋರೈಡ್ ನೀರೇ ಗತಿಯಾಗಿದೆ. ಇದರಿಂದ ಮುಕ್ತಿ ಪಡೆಯಲು ಅನಿವಾರ್ಯವಾಗಿ ಬಡವ ಶ್ರೀಮಂತ ಎನ್ನುವ ಭೇದವಿಲ್ಲದೇ ಜನರು ಹೆಚ್ಚಿನ ಹಣ ನೀಡಿ ಖಾಸಗಿಯವರಲ್ಲಿ ಟ್ಯಾಂಕರ್ ಮೂಲಕ ಸಿಹಿ ನೀರು ಖರೀದಿಸುವುದು ಅನಿವಾರ್ಯವಾಗಿದೆ. ಅವಳಿ ನಗರಕ್ಕೆ ಜಾರಿಯಾಗಿರುವ ಬೃಹತ್ 24x7 ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದರು.ಅವಳಿ ನಗರದ ಎಲ್ಲ ಬಡಾವಣೆಗಳಿಗೂ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದ ಕೆಲವೊಮ್ಮೆ ವಿಳಂಬವಾಗುತ್ತದೆ. ಅದನ್ನು ಈಗಾಗಲೇ ಸರಿಪಡಿಸಲಾಗಿದೆ. ಆದರೆ ಕೊಳವೆಬಾವಿಗಳ ನೀರಿನಲ್ಲಿ ಹೆಚ್ಚಿನ ಕ್ಷಾರ ಇದೆ ಎಂದು ನಗರಸಭೆ ಅಭಿಯಂತರ ಲಕ್ಷ್ಮಣ ಜೆ. ತಿಳಿಸಿದರು.