ಸಾರಾಂಶ
ರಾಜಧಾನಿಯಲ್ಲಿ ಹೊಸವರ್ಷಾಚರಣೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನಸಂದಣಿ ಸ್ಥಳಗಳಲ್ಲಿ ಸಣ್ಣಪುಟ್ಟ ತಳ್ಳಾಟ-ನೂಕಾಟ, ವಾಗ್ವಾದದಂತಹ ಘಟನೆಗಳನ್ನು ಹೊರತುಪಡಿಸಿ ಉಳಿದಂತೆ ಶಾಂತಿಯುತವಾಗಿ ಹೊಸವರ್ಷದ ಸಂಭ್ರಮ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿಯಲ್ಲಿ ಹೊಸವರ್ಷಾಚರಣೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನಸಂದಣಿ ಸ್ಥಳಗಳಲ್ಲಿ ಸಣ್ಣಪುಟ್ಟ ತಳ್ಳಾಟ-ನೂಕಾಟ, ವಾಗ್ವಾದದಂತಹ ಘಟನೆಗಳನ್ನು ಹೊರತುಪಡಿಸಿ ಉಳಿದಂತೆ ಶಾಂತಿಯುತವಾಗಿ ಹೊಸವರ್ಷದ ಸಂಭ್ರಮ ಆಚರಿಸಲಾಯಿತು.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಕೋರಮಂಗಲ, ಫಿನಿಕ್ಸ್ ಮಾಲ್, ಇಂದಿರಾನಗರ 100 ಅಡಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೊಸ ವರ್ಷಾಚರಣೆಗೆ ಹೆಚ್ಚು ಜನ ಸಮಾವೇಶಗೊಳ್ಳುವ ಬ್ರಿಗೇಡ್ ರಸ್ತೆ-ಎಂಜಿ.ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಭದ್ರತೆಗಾಗಿ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಹಿಳೆಯ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರುವ ‘ಮಹಿಳಾ ಸುರಕ್ಷಾ ಸ್ಥಳ’ಗಳನ್ನು ತೆರೆಯಲಾಗಿತ್ತು. ನಗರದಾದ್ಯಂತ ಯಾವುದೇ ಅಹಿತರ ಘಟನೆಗಳು ನಡೆಯದಂತೆ 11 ಸಾವಿರಕ್ಕೂ ಅಧಿಕ ಪೊಲಿಸ್ ಅಧಿಕಾರಿಗಳು/ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.ಅಂತೆಯೆ ಪೊಲೀಸರು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಮಂಗಳವಾರ ರಾತ್ರಿ 11 ಗಂಟೆಯಿಂದಲೇ ಏರ್‌ಪೋರ್ಟ್ ರಸ್ತೆ ಮೇಲ್ಸೇತುವೆ ಹೊರತುಪಡಿಸಿ ಉಳಿದ ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರು. ಮೇಲ್ಸೇತುವೆಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇರಿಸಿದ್ದರು.