ಸಾರಾಂಶ
ಸೆ. 10ರಂದು ಉಪನಗರ ಠಾಣೆಯಿಂದ ಕರ್ತವ್ಯಕ್ಕೆ ಹಾಜರಾಗಲು ಎಎಸ್‌ಐ ನಾಭಿರಾಜ ಅವರು ಬೈಕ್‌ನಲ್ಲಿ ತೆರಳುತ್ತಿರುವಾಗ ಮೇಲ್ಸೇತುವೆ ಕಾಮಗಾರಿಗೆ ಕ್ರೇನ್‌ನಿಂದ ಕಬ್ಬಿಣದ ರಾಡ್ ಮೇಲೆತ್ತುವಾಗ ಅದು ಇವರ ತಲೆ ಮೇಲೆ ಬಿದ್ದಿತ್ತು.
ಹುಬ್ಬಳ್ಳಿ:
ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿ ಮೇಲ್ಸೇತುವೆ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಎಎಸ್‌ಐ ನಾಭಿರಾಜ ದಯಣ್ಣವರ ಪ್ರಕರಣಕ್ಕೆ ಸಂಬಂಧಿಸಿ, ಉಪನಗರ ಠಾಣೆ ಪೊಲೀಸರು ಸೋಮವಾರ 11 ಮಂದಿ ಬಂಧಿಸಿದ್ದಾರೆ.ಕಾಮಗಾರಿಯ ಪರಿವೀಕ್ಷಕ ಹರ್ಷ ಹೊಸಗಾಣಿಗೇರ, ಎಂಜಿನಿಯರ್‌ಗಳಾದ ಜಿತೇಂದ್ರಪಾಲ ಶರ್ಮಾ ಮತ್ತು ಭೂಪೇಂದ್ರಪಾಲ್ ಸಿಂಗ್, ಕ್ರೇನ್ ಚಾಲಕ ಅಸ್ಲಂ ಜಲೀಲಮಿಯಾ, ಸಿಬ್ಬಂದಿಯಾದ ಮೊಹಮ್ಮದ್ ಮಿಯಾ, ಮೊಹಮ್ಮದ್ ಮಸೂದರ, ಮೊಹಮ್ಮದ್ ಹಾಜಿ, ರಿಜಾವಲ್ ಮಂಜೂರ ಅಲಿ, ಶಮೀಮ್ ಶೇಖ್, ಮೊಹಮ್ಮದ್ ಖಯೂಮ್ ಹಾಗೂ ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಹಿಮಾನ್ ಬಂಧಿತರು.
ಗುತ್ತಿಗೆ ಪಡೆದ ದೆಹಲಿಯ ಜಂಡು ಕಂಪನಿ ಕಾಮಗಾರಿ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳದೆ ಕಾಮಗಾರಿ ನಡೆಸಿದ್ದರಿಂದ ಅವಘಡ ನಡೆದಿದೆ ಎಂದು ಕಂಪನಿಯ ಮೂವರು ವ್ಯವಸ್ಥಾಪಕ ನಿರ್ದೇಶಕರು ಸೇರಿ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೂ ಕೆಲವರನ್ನು ಬಂಧಿಸುವ ಪ್ರಕ್ರಿಯೆ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸೆ. 10ರಂದು ಉಪನಗರ ಠಾಣೆಯಿಂದ ಸವಾಯಿ ಗಂಧರ್ವ ಹಾಲ್ ಬಳಿ ಕರ್ತವ್ಯಕ್ಕೆ ಹಾಜರಾಗಲು ಎಎಸ್‌ಐ ನಾಭಿರಾಜ ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಮೇಲ್ಸೇತುವೆ ಕಾಮಗಾರಿಗೆ ಕ್ರೇನ್‌ನಿಂದ ಕಬ್ಬಿಣದ ರಾಡ್ ಮೇಲೆತ್ತುವಾಗ ಅದು ಜಾರಿ, ಕೆಳಗೆ ಹೋಗುತ್ತಿದ್ದ ಎಎಸ್‌ಐ ಅವರ ತಲೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೆಎಂಸಿಐಆರ್ ಆಸ್ಪತ್ರೆಯಲ್ಲಿ ಆರು ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು, ಭಾನುವಾರ ಮೃತಪಟ್ಟಿದ್ದಾರೆ.
ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.