ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿವಿಧ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಾಂಶುಪಾಲರ ಸಹಕಾರದೊಂದಿಗೆ ಕಳೆದ ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಹೊಸ ಸದಸ್ಯತ್ವ ಮಾಡಿರುವುದಲ್ಲದೆ, ಕಾಲೇಜಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಮುಂದಿನ ಎರಡು ತಿಂಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮ, ಉದ್ಯೋಗ ಎದುರಿಸಲು ಬೇಕಾದ ತರಬೇತಿ ಕಾರ್ಯಾಗಾರವನ್ನು ನಡೆಸುವಂತೆ ಹಾಗೂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಹಾಗೂ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ನಡೆಸುವುದಾಗಿ ತಿಳಿಸಿದರು. ಆಡಳಿತ ಮಂಡಳಿ ಸದಸ್ಯರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವಂತೆ ವಿನಂತಿಸಿಕೊಂಡರು. ದಾನಿಗಳ ಮುಖಾಂತರ ಹಳೆ ವಿದ್ಯಾರ್ಥಿಗಳ ಸಂಘದ ಖಾತೆಗೆ ಹಣ ಸಹಾಯವನ್ನು ಪಡೆಯುವಂತೆ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ., ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮೈದಾನ ಹಾಗೂ ಕಾಲೇಜಿನ ಸುತ್ತಮುತ್ತಲಿನ ಪ್ರಾದೇಶದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ಅಲ್ಲದೆ ಹಲವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಿರುವುದಲ್ಲದೆ, ಎನ್‍ಸಿಸಿ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ರೈಫಲ್ ರೆಂಜ್ ಅನ್ನು ಮಾಡಿಕೊಟ್ಟಿದ್ದಾರೆ ಎಂದರು.ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿ ಹಾಗೂ ರೈಫಲ್ ರೇಂಜ್ ಕಾಮಗಾರಿ ಹಾಗೂ ಕಾರ್ಯಕ್ರಮದ ಲೆಕ್ಕಪತ್ರ ಮಂಡಿಸಿದರು. ಸಂಘದ ನಿರ್ದೇಶಕ ತೆನ್ನಿರಾ ಟೀನಾ ಚಂಗಪ್ಪ ಹಳೆ ವಿದ್ಯಾರ್ಥಿಗಳ ಸಂಘಕ್ಕೆ 5000 ರು. ನೀಡಿದರು.

ಸಂಘದ ನಿರ್ದೇಶಕ ಮಾಗಲು ಲೋಹಿತ್, ಬಿ.ಜಿ.ಹರ್ಷಿತ್, ಎಸ್.ಆರ್.ವತ್ಸಲಾ, ಕೆ.ಹೆಚ್.ಖುರ್ಷಿದ್ ಬಾನು, ಕೇಲೆಟ್ಟಿರ ದೇವಯ್ಯ, ಆಪಾಡಂಡ ಜಾನ್ಸಿ ಗಣಪತಿ, ಕರವಂಡ ಸೀಮಾ ಗಣಪತಿ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಚರಣ್ ಬಲ್ಯದ, ಚೀಯಕಪೂವಂಡ ಸಚಿನ್ ಪೂವಯ್ಯ, ಕಾಲೇಜಿನ ಸಿಬ್ಬಂದಿಗಳಾದ ಪವಿತ್ರ, ರೇಷ್ಮ ಹಾಗೂ ಮತ್ತಿತರರು ಇದ್ದರು. ಹಳೆ ವಿದ್ಯಾರ್ಥಿಸಂಘ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಸ್ವಾಗತಿಸಿದರು. ಉಪಾಧ್ಯಕ್ಷರಾದ ಬೊಟ್ಟೊಳಂಡ ಗಣಪತಿ ವಂದಿಸಿದರು.