ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪೊಲೀಸ್ ಸಿಬ್ಬಂದಿ ಕರ್ತವ್ಯದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೋಗ್ಯವಾಗಿದ್ದರೆ ಮಾತ್ರ ಸಮಾಜದ ರಕ್ಷಣೆ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ಬೃಂಗೇಶ್ ತಿಳಿಸಿದರು.ನಗರದ ಡಿಎಆರ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ನೆರವೇರಿಸಿ ಮಾತನಾಡಿ, ಕರ್ತವ್ಯ ನಿರ್ವಹಣೆ ಮಾಡುವ ವೇಳೆ ನಾವು ನಮ್ಮ ವೈಯಕ್ತಿಕ ಸುಖದುಃಖಗಳು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಕೊಡುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಕೂಡ ಕರ್ತವ್ಯ ಮಾಡುವ ಜೊತೆ ಜೊತೆಯಲ್ಲಿ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ಹುಟ್ಟಿದ ಮೇಲೆ ಸಾವು, ಇದು ಪ್ರಕೃತಿ ಮತ್ತು ದೇವರ ಇಚ್ಛೆ. ಆದರೆ, ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುವುದು ಬಹಳ ಮುಖ್ಯ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ನಿಜಕ್ಕೂ ಪುಣ್ಯದ ಮತ್ತು ಗೌರವಯುತ ಕೆಲಸ ಎಂದರು.ದೇಶಕ್ಕಾಗಿ ಪ್ರಾಣ ಅರ್ಪಿಸಿದವರಿಗೆ ಅವರ ಅಂತಿಮ ದರ್ಶನದಲ್ಲಿ ಮೃತ ದೇಹದ ಮೇಲೆ ರಾಷ್ಟ್ರ ಧ್ವಜವನ್ನು ಇಟ್ಟು ಗೌರವ ಸಮರ್ಪಣೆ ಮಾಡುತ್ತಾರೆ. ಅದಕ್ಕಿಂತ ಬಹುದೊಡ್ಡ ಗೌರವ ಮತ್ತೊಬ್ಬ ವ್ಯಕ್ತಿಗೆ ಸಿಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದರು.
ಇದೇ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ಪ್ರತಿಯೊಬ್ಬ ಹುತಾತ್ಮರಿಗೂ ನಮನ ಸಲ್ಲಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ ಎಲ್ಲಾ ಹುತಾತ್ಮರನ್ನು ಸ್ಮರಿಸುತ್ತಾ ಅವರಿಗೆ ಗೌರವ ಸಮರ್ಪಣೆ ನೆರವೇರಿಸಿ ಮಾತನಾಡಿ, ಪ್ರಾಯಶಃ ಈ ಗೌರವ ಸಮರ್ಪಣೆ ಎನ್ನುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಂತಹವರಿಗೆ ನಾವು ಗೌರವ ಸಲ್ಲಿಸಿದರೆ ನಮ್ಮ ದೇಶಕ್ಕೆ, ಸಂವಿಧಾನಕ್ಕೆ ಗೌರವ ಸಲ್ಲಿಸದಂತೆ ಎಂದರು.
ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿ ಮಡಿದ ಪ್ರತಿಯೊಬ್ಬ ಪೊಲೀಸರು ಹಾಗೂ ಸೈನಿಕರು ಕೂಡ ಪುಣ್ಯವಂತರು. ಅವರ ಬದುಕು ಹಾಗೂ ಸಾವು ಎರಡು ಕೂಡ ಸಾರ್ಥಕವಾದದ್ದು ಎಂದರು.ಪೊಲೀಸ್ ಇಲಾಖೆಯಲ್ಲಿ ಈ ವರ್ಷದಲ್ಲಿ ಸುಮಾರು 213 ಪೊಲೀಸರು ಹುತಾತ್ಮರಾಗಿದ್ದಾರೆ. ಕಾರ್ಯ ನಿರ್ವಹಿಸುತ್ತಿರುವಂತಹ ಅನೇಕ ಸಿಬ್ಬಂದಿ ಕೂಡ ಈ ಸಮಾಜ ಸ್ವಾಸ್ತ್ಯವನ್ನು ಕಾಪಾಡುವದಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿರುತ್ತಾರೆ ಎಂದರು.
ಸ್ವಾಸ್ತ್ಯ ಸಮಾಜವಾದ ಜೊತೆಗೆ ಎಲ್ಲರೂ ನೆಮ್ಮದಿಯಿಂದ ಸಂತೋಷವಾಗಿರಬೇಕು, ಆದರ್ಶ ಸಮಾಜದ ಪರಿಕಲ್ಪನೆಗೆ ಸೈನಿಕ, ಶಿಕ್ಷಕ, ಕೃಷಿಕ, ಆರಕ್ಷಕ ಈ ನಾಲ್ಕು ವರ್ಗದವರು ಕೂಡ ಸಮಾಜದ ಆಧಾರಸ್ತಂಭಗಳು ಎಂದರು.ಸೈನಿಕರು ದೇಶದ ಗಡಿಯಲ್ಲಿ ನಿಂತುಕೊಂಡು ನಮಗೆಲ್ಲ ರಕ್ಷಣೆ ಕೊಟ್ಟರೆ, ದೇಶದ ಒಳಗಡೆ ಇದ್ದು ದೇಶದ ರಕ್ಷಣೆ ಮಾಡುತ್ತಿರುವವರೇ ಆರಕ್ಷಕ ಸಿಬ್ಬಂದಿ ಇಂತಹ ಆರಕ್ಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪೊಲೀಸ್ ಇಲಾಖೆ ಸಿಬ್ಬಂದಿ ಸಮಯದ ಪರಿವೇ ಇಲ್ಲದೆ ತಮ್ಮ ಸಮವಸ್ತ್ರ ಧರಿಸಿ ಗಾಳಿ, ಮಳೆ ಬಿಸಿಲು ಎನ್ನದೇ ದೇಶಕ್ಕೆ ಸೇವೆ ಸಲ್ಲಿಸುತ್ತ ಇರುತ್ತಾರೆ. ಇವರ ಸೇವೆ ಆಕಾಶದ ಎತ್ತರದಷ್ಟಿದ್ದು ವರ್ಣಿಸಲು ಅಸಾಧ್ಯ. ಕರ್ತವ್ಯ ಸೇವೆ ಸಲ್ಲಿಸುವುದು ಎಷ್ಟು ಮುಖ್ಯವೋ ಅದೇ ರೀತಿ ನಿಮ್ಮ ವೈಯಕ್ತಿಕ ಆರೋಗ್ಯವು ಕೂಡ ಅಷ್ಟೇ ಮುಖ್ಯ ಎಂದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಆರಕ್ಷಕರು ಕುಟುಂಬದಿಂದ ದೂರ ಇದ್ದು ಮಾನಸಿಕ ನೋವನ್ನು ಅನುಭವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದೇ ಇರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದರು.
ಇದೇ ಸಂದರ್ಭದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು, ಗಣ್ಯರು ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಹುತಾತ್ಮ ಗೌರವ ಪಡೆ ವತಿಯಿಂದ ಹುತಾತ್ಮರ ಸ್ಮರಣಾರ್ಥ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಈ. ತಿಮ್ಮಯ್ಯ, ಗಂಗಾಧರಸ್ವಾಮಿ, ಕಸಾಪ ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷರಾದ ಪ್ರಕಾಶ್ ಎಂ.ವಿ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.