ಆರೋಗ್ಯ ಕುರಿತು ಗಮನ ಹರಿಸಿ: ಡಾ. ಚೈತ್ರಾ

| Published : May 20 2024, 01:40 AM IST

ಸಾರಾಂಶ

ಚಿತ್ರದುರ್ಗದ ರೋಟರಿ ಬಾಲ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ಚೈತ್ರ ರವಿ ಉದ್ಘಾಟಿಸಿದರು.

ರೋಟರಿ ಕ್ಲಬ್ ಚಿತ್ರದುರ್ಗ, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋದಿಂದ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಕೊಡಬೇಕೆಂದು ಹೆರಿಗೆ ಮತ್ತು ಸ್ತೀ ರೋಗ ತಜ್ಞೆ ಡಾ. ಚೈತ್ರ ರವಿ ಹೇಳಿದರು.

ರೋಟರಿ ಕ್ಲಬ್ ಚಿತ್ರದುರ್ಗ, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯವಾಗಿದೆ. ಇದಕ್ಕೆ ಒತ್ತಡದ ಜೀವನ ಕಾರಣವಾಗಿದ್ದು, ಆರೋಗ್ಯದ ಬಗ್ಗೆ ಯಾರು ನಿರ್ಲಕ್ಷೆ ತೋರದೆ, ಉಚಿತ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜ್ ಮಾತನಾಡಿ, ವಿವಿಧ ಆಸ್ಪತ್ರೆಗಳ ವೈದ್ಯರನ್ನು ಸಂಪರ್ಕಿಸಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದೇವೆ. ಪ್ರತಿಯೊಬ್ಬರು ದೊಡ್ಡ ದೊಡ್ಡ ನಗರಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಕಷ್ಟ. ಅದಕ್ಕಾಗಿ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಎಸ್.ವೀರೇಶ್ ಮಾತನಾಡಿ, ರೋಟರಿ ಕ್ಲಬ್ ಮೊದಲಿನಿಂದಲೂ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲಿ ಉಚಿತ ಆರೋಗ್ಯ ತಪಾಸಣೆ ಬಹಳ ಮುಖ್ಯವಾದುದು. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಈ ವೇಳೆ ರೋಟರಿ ಕ್ಲಬ್ ಕಾರ್ಯದರ್ಶಿ ವಿಕ್ರಾಂತ್‍ಜೈನ್, ಡಾ.ರವಿ ಹೆಚ್.ರಂಗಾರೆಡ್ಡಿ ವೇದಿಕೆಯಲ್ಲಿದ್ದರು. ಸೂರ್ಯನಾರಾಯಣ, ಡಾ.ತಿಪ್ಪೇಸ್ವಾಮಿ, ನಿಯೋಜಿತ ಅಧ್ಯಕ್ಷ ಜಿ.ಎನ್.ವೀರಣ್ಣ, ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಪರಶುರಾಂ ಇದ್ದರು. ಈ ಸಂದರ್ಭದಲ್ಲಿ 75 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.