ಕನ್ನಡಪ್ರಭ ವಾರ್ತೆ ಪಾವಗಡ

ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸೇರಿದಂತೆ ತಾಲೂಕಿನ ಜನಪರ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷರಾದ ಎಚ್.ವಿ.ವೆಂಕಟೇಶ್‌ ಅವರು ತಿಳಿಸಿದರು.ತಾಲೂಕು ಆಡಳಿತ ವತಿಯಿಂದ ಸೋಮವಾರ ಪಟ್ಟಣದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಜನಪರ ಸಮಸ್ಯೆ ನಿವಾರಣೆ ಹಿನ್ನಲೆಯಲ್ಲಿ ಪ್ರತಿ ಸೋಮವಾರ ತಾಲೂಕು ಆಡಳಿತದಿಂದ ಜನಸಂಪರ್ಕ ಸಭೆ ಏರ್ಪಾಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಜನರ ಸಮಸ್ಯೆ ನಿವಾರಿಸುವುದಾಗಿ ಹೇಳಿದರು. ಈಗಾಗಲೇ ಬಾರಿ ಬಂದಿದ್ದ ಅರ್ಹ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯಾರ್ಥಗೊಳಿಸಿದ್ದು, ವಿದ್ಯಾರ್ಥಿಗಳ ಹಾಸ್ಟೆಲ್‌ ಸೌಲಭ್ಯ ಹಾಗೂ ಸಾಗುವಳಿ ಜಮೀನುಗಳ ವಿಚಾರವಾಗಿ ಇಂದು 45ಕ್ಕಿಂತ ಹೆಚ್ಚು ಅಹವಾಲು ಬಂದಿದ್ದು ಪರಿಶೀಲಿಸುವ ಮೂಲಕ ಕೂಡಲೇ ಸಮಸ್ಯೆ ನಿವಾರಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಾಲೂಕಿನ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಈಗಾಗಲೇ ಸಂಬಂಧಪಟ್ಟ ಮುಜರಾಯಿ ಇಲಾಖೆಯ ಆಯುಕ್ತರ ಜತೆ ಚರ್ಚಿಸಿದ್ದು, ಸುಸಜ್ಜಿತ ಕುಕ್ಕೆ ಮಾದರಿಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಸಜ್ಜಾಗಿರುವುದಾಗಿ ತಿಳಿಸಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಯುವ ಹಾಗೂ ಭೋವಿ ಸಮುದಾಯ ಪರಿಗಣಿಸಿ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ. ಸಿಎಂ ಹಾಗೂ ಪಕ್ಷದ ಹಿರಿಯ ಮುಖಂಡರು ಕೊಟ್ಟರೆ ಸಚಿವರಾಗುತ್ತೇನೆ. ಇಲ್ಲವಾದರೆ ಶಾಸಕರಾಗಿಯೇ ಜನಪರ ಕೆಲಸದಲ್ಲಿ ನಿರತರಾಗುವುದಾಗಿ ಹೇಳಿದರು.