ಭೂಸಾರ ಸಂರಕ್ಷಣೆಯತ್ತ ಚಿತ್ತ ಹರಿಸಿ: ಡಿಸಿ ಜಾನಕಿ

| Published : Oct 29 2024, 12:57 AM IST

ಸಾರಾಂಶ

ಹಳಿಂಗಳಿ ಗ್ರಾಮದ ಪ್ರಗತಿಪರ ರೈತ ಧನಪಾಲ ಯಲ್ಲಟ್ಟಿ ತೋಟಕ್ಕೆ ಭೇಟಿ ನೀಡಿದ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಸ್ನೇಹಪ್ರೀತಿ ನಿಮ್ಮೊಂದಿಗೆ ರೈತ ಸಂಘಟನೆ ಎರಡನೇ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಹುಲಾಭದ ದುರಾಸೆಯಿಂದ ಭೂಸಾರ ಸಂರಕ್ಷಣೆಯತ್ತ ಚಿತ್ತ ಹರಿಸದೇ ರಾಸಾಯನಿಕ ಮತ್ತು ಕೀಟನಾಶಕಗಳ ವಿಪರೀತ ಬಳಕೆಗೆ ರೈತ ಸಮೂಹ ಮುಂದಾಗುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಕೃಷಿಜನ್ಯ ವಸ್ತುಗಳ ಉತ್ಪಾದನೆ ಮತ್ತು ಬಳಕೆಯಲ್ಲಿನ ಅಸಮತೋಲನ ಮನುಕುಲಕ್ಕೆ ಮಾರಕವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ಭಾನುವಾರ ತಾಲೂಕಿನ ಹಳಿಂಗಳಿ ಗ್ರಾಮದ ಚಕ್ರೇಶ್ವರಿ ಫಾರ್ಮ್‌ನಲ್ಲಿನ ಟೊಮ್ಯಾಟೋ ಮತ್ತು ಹೀರೇಕಾಯಿ ಬೆಳೆಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ಅವರು ಸ್ನೇಹಪ್ರೀತಿ ನಿಮ್ಮೊಂದಿಗೆ ರೈತ ತಂಡದ ಸಮಗ್ರ ತರಕಾರಿ ಬೆಳೆಗಳ ಚರ್ಚಾಗೋಷ್ಠಿ 2ನೇ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ರೈತ ಧನಪಾಲ ರವರು ಅಧಿಕ ಫಸಲು ನೀಡುವ ವಿವಿಧ ತಳಿಯ ಕಬ್ಬಿನ ಬೆಳೆಗಳನ್ನು ಪರಿಚಯಿಸಿದ್ದಾರೆ. ಇಳುವರಿ ಅಧಿಕ ಕಡಿಮೆ ನಿರ್ವಹಣಾ ವೆಚ್ಚದ ಅವರ ಬಹುಬೆಳೆ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಮಣ್ಣಿನ ಫಲವಂತಿಕೆ ಹೆಚ್ಚಿಸಲು ಜೈವಿಕ ಗೊಬ್ಬರದ ಬಳಕೆ ಅಗತ್ಯವಾಗಿದೆ. ಇದರಿಂದ ದೂರದೃಷ್ಟಿ ಮತ್ತು ಶಾಶ್ವತ ವ್ಯವಸಾಯ ಸಾಧ್ಯವಾಗುತ್ತದೆ ಎಂದರು.

ವೈಜ್ಞಾನಿಕವಾಗಿ ಬೆಳೆಗೆ ಅಗತ್ಯವಿದ್ದಷ್ಟೇ ನೀರು, ಗೊಬ್ಬರ ಮತ್ತು ಕೀಟಗಳ ನಿಯಂತ್ರಕ ಕ್ರಮಗಳ ಅನುಸರಿಸುವುದರಿಂದ ಬಹುಬೆಳೆ ಪದ್ಧತಿಯಲ್ಲಿ ಪ್ರತಿ ಎಕರೆಗೆ ೫೫ ರಿಂದ ೬೦ ಟನ್ ಟೊಮ್ಯಾಟೋ ಬೆಳೆದಿರುವುದು ಪ್ರಶಂಸಾರ್ಹ. ಮಾರುಕಟ್ಟೆಯಲ್ಲಿ ಫಸಲು ಬರುವಾಗಿನ ಬೆಲೆಯ ಬಗ್ಗೆಯೂ ಜ್ಞಾನ ಹೊಂದಿದ್ದರೆ, ರೈತರು ಕೃಷಿಯಲ್ಲಿ ದಾಖಲೆಯ ಲಾಭ ಗಳಿಸಬಹುದು. ತರಕಾರಿ, ಹಣ್ಣು, ಅರಿಷಿಣ ಮತ್ತು ಕಬ್ಬು ಬೆಳೆಗಳ ವಿವಿಧ ತಳಿಗಳನ್ನು ಬೆಳೆಸುವ ಮೂಲಕ ರೈತರು ಸರಾಸರಿ ಅವಧಿಯಲ್ಲಿ ಅತೀ ಹೆಚ್ಚು ಲಾಭ ಗಳಿಸಲು ಸಾಧ್ಯ. ಭೂ ಫಲವತ್ತತೆ ಸಂರಕ್ಷಣೆಗೆ ಸಾವಯವ, ನೈಸರ್ಗಿಕ ಮತ್ತು ಭೂ ಸಾರಕ್ಕೆ ಧಕ್ಕೆಯಾಗದಂತೆ ಕೊರತೆ ಪೋಷಕಾಂಶಗಳ ನೀಡುವುದು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಅಪಾಯಕಾರಿಯಲ್ಲದ, ಭೂ ವಿಜ್ಞಾನಿಗಳು ನೀಡಿದ ಸಲಹೆಯನುಸಾರ ಕೀಟನಾಶಕಗಳ ಬಳಸುವ ಮೂಲಕ ರೈತರು ಮುಂದಿನ ದಿನಗಳಲ್ಲಿಯೂ ಕೃಷಿ ಪದ್ಧತಿ ಅಬಾಧಿತವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ನುಡಿದರು.

ಸ್ನೇಹ ಪ್ರೀತಿ ನಿಮ್ಮೊಂದಿಗೆ ತಂಡ ರಾಜ್ಯದ ವಿವಿಧ ಭಾಗಗಳ ರೈತರಿಂದ ಕೂಡಿದ್ದು, ಎಲ್ಲರೂ ಮಾಸಾಂತ್ಯದ ಕೊನೇ ಭಾನುವಾರ ಒಂದೆಡೆ ಸೇರಿ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿರುವುದು ಇತರೆ ರೈತರಿಗೂ ಮಾದರಿಯಾಗಲಿ. ಇದರಿಂದ ರೈತರಲ್ಲಿ ಪರಸ್ಪರ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಕೊಡುಕೊಳ್ಳುವಿಕೆ ನಡೆದು ಅಭ್ಯುದಯ ಸಾಧ್ಯವಾಗುತ್ತದೆಂದರು.

ಈ ಸಂದರ್ಭದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಷ್ಣುವರ್ಧನ, ಸಂಚಾಲಕ ರೂಪೇಶ ಕಾಮತ್, ಸಚಿನ್ ಬಾಳಗೊಂಡ, ರೂಪಾ ಗಾಣಿಗೇರ, ಸುರೇಶ ಹೊಸಮನಿ, ಡಿ.ಸಿ.ಸದಲಗಿ, ಶಿವಾನಂದ ಜೋತೆಪ್ಪನವರ, ಶಿವಾನಂದ ಬಾಗಲಕೋಟಮಠ, ಆರ್ ಎಂ .ತುಳಸಿಗೇರಿ, ವರ್ಧಮಾನ ಕಡಟ್ಟಿ, ಶ್ರೀಕಾಂತ ಕುಂಬಾರ, ಶ್ವೇತಾ ದೇಸಾಯಿ, ಸ್ವಾತಿ ಭರಮಪ್ಪ ಯಲ್ಲಟ್ಟಿ, ಜಿನ್ನಪ್ಪ ಸವದತ್ತಿ, ಅಶೊಕ ಆಳಗೊಂಡ, ಸುರೇಶ ಕಬಾಡಗಿ, ಲಕ್ಷ್ಮಣ ಹಿಡಕಲ್, ಭುಜಬಲಿ ವೆಂಕಟಾಪೂರ, ಪರಪ್ಪ ಹಿಪ್ಪರಗಿ, ಡಾ.ಎಂ.ಎಂ.ನದಾಫ್, ಸಹಕಾರಿ ಧುರೀಣ ಮಗೆಪ್ಪ ದೇಸಾಯಿ, ಮಹಾವೀರ ಪಾಟೀಲ ಇದ್ದರು.

ವಕ್ಫ ಬೋರ್ಡ್ ಸರ್ವಾಧಿಕಾರತ್ವ ತಡೆಗೆ ಮನವಿ:

ರಾಜ್ಯದ ೧೮ ಜಿಲ್ಲೆಗಳ ವ್ಯಾಪ್ತಿಯ ರೈತರನ್ನೊಳಗೊಂಡ ಸ್ನೇಹಪ್ರೀತಿ ನಿಮ್ಮೊಂದಿಗೆ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯಾದ್ಯಂತ ವಕ್ಫ ಬೋರ್ಡ್‌ನಿಂದ ರೈತರು ತಲೆಮಾರುಗಳಿಂದ ಸಾಗುವಳಿ ಮಾಡುತ್ತ ಮಾಲೀಕತ್ವ ಹೊಂದಿರುವ ಜಮೀನುಗಳನ್ನು ತಮ್ಮ ಆಸ್ತಿ ಎಂದು ಘೋಷಿಸುತ್ತಿರುವ ವಕ್ಫ ಬೋರ್ಡ್ ಕ್ರಮ ಅಸಿಂಧುವಾಗಿದ್ದು, ರೈತವಿರೋಧಿ ಮತ್ತು ಸರ್ವಾಧಿಕಾರದ ಪರಾಕಾಷ್ಠೆಯಾಗಿದೆ. ನಾವು ಯಾವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆಯೇ ಎಂಬ ಶಂಕೆ ಮೂಡುತ್ತಿರುವುದರಿಂದ ವಕ್ಫ ಬೋರ್ಡ್‌ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಲಾಯಿತು.