ಮಕ್ಕಳ ಕಲಿಕೆಯ ಗುಣಮಟ್ಟದ ಕಡೆ ಗಮನಹರಿಸಿ: ಹನುಮಶೆಟ್ಟಿ

| Published : Aug 29 2024, 12:50 AM IST

ಮಕ್ಕಳ ಕಲಿಕೆಯ ಗುಣಮಟ್ಟದ ಕಡೆ ಗಮನಹರಿಸಿ: ಹನುಮಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕಲಿಕೆಯ ಗುಣಮಟ್ಟದ ಕಡೆ ಹೆಚ್ಚು ಗಮನಹರಿಸಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕಲಿಕೆಯ ಗುಣಮಟ್ಟದ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ವ್ಹಿ.ಬಿ. ಹನುಮಶೆಟ್ಟಿ ಹೇಳಿದರು.

ತಾಲೂಕಿನ ಬಳೂಟಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ಪಾಲಕರ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಿಮ್ಮ ಮಕ್ಕಳು ವಸತಿ ಶಾಲೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಸಾಲದು. ಅವರು ಯಾವ ವಿಷಯಗಳಲ್ಲಿ ಓದು, ಬರಹ, ಬುದ್ದಿಮಟ್ಟ, ಶಿಸ್ತು, ಸಂಯಮ ಹೇಗಿದೆ. ಯಾವ ರೀತಿ ಬದಲಾವಣೆ ಹೊಂದಿದ್ದಾರೆ ಎನ್ನುವುದನ್ನು ಮನನ ಮಾಡಿಕೊಂಡು ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕು ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಡಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಗಳನ್ನು ವೆಚ್ಚ ಮಾಡಿ ಇಂತಹ ಸುಸಜ್ಜಿತ ಕಟ್ಟಡದ ಮೂಲಕ ಎಲ್ಲ ಸೌಲಭ್ಯವನ್ನು ನೀಡಿದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ನೋವಿನ ಸಂಗತಿ. ಜತೆಗೆ ಇಲ್ಲಿ ಎಲ್ಲ ರೀತಿಯಿಂದಲೂ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಸಹ ಇದಕ್ಕೆ ಹೆಚ್ಚಿನ ಸಹಕಾರ ನೀಡುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಕಾರಣರಾಗಬೇಕು ಎಂದು ಹೇಳಿದರು.

ವಸತಿ ಶಾಲೆಯ ಪ್ರಾಂಶುಪಾಲ ಜೆ.ಎಚ್. ಬೇಸ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡುವ ಮೂಲಕ ಹೆಚ್ಚು ಅಂಕ ಪಡೆದುಕೊಳ್ಳಬೇಕು. ಜತೆಗೆ ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಛಲ ಹೊಂದಬೇಕು. ಅಂದಾಗ ಆದರ್ಶ ವಿದ್ಯಾರ್ಥಿಗಳಾಗಬಹುದು ಎಂದರು.

ಮಕ್ಕಳ ಪಾಲಕರಾದ ಶರಣಪ್ಪ ತಳವಾರ ಹಾಗೂ ಶರಣಪ್ಪ ಲೈನದ ಮತ್ತು ವಿದ್ಯಾರ್ಥಿಗಳಾದ ಫರೀದಾ, ಸಹನಾ ಇಟಗಿ ತಮ್ಮ ಅನಿಸಿಕೆ ತಿಳಿಸಿದರು.

ಶಿಕ್ಷಕರಾದ ಶ್ರೀಕಾಂತ, ಸಾವಿತ್ರಿ ಡಂಬಳ, ಶ್ರೀನಿವಾಸ ದೇಸಾಯಿ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಣ ನಾಗರಾಜ ನಾಯಕ ನಿರೂಪಿಸಿ, ಹನುಮಂತಪ್ಪ ವಂದಿಸಿದರು.