ಸಾರಾಂಶ
ದೊಡ್ಡಬಳ್ಳಾಪುರ: ರಾಜ್ಯ ಶಿಕ್ಷಣ ಮಂತ್ರಿಗಳು, ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವುದು, ಶಿಕ್ಷಕರನ್ನು ನೇಮಕ ಮಾಡುವುದು ಸೇರಿದಂತೆ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ದೊಡ್ಡಬಳ್ಳಾಪುರ: ರಾಜ್ಯ ಶಿಕ್ಷಣ ಮಂತ್ರಿಗಳು, ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವುದು, ಶಿಕ್ಷಕರನ್ನು ನೇಮಕ ಮಾಡುವುದು ಸೇರಿದಂತೆ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ನಗರದ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘ ಆಯೋಜಿಸಿದ್ದ ಸಂಘದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಡಿಗ ಸಮುದಾಯದಂತಹ ಹಿಂದುಳಿದ ವರ್ಗಗಳಲ್ಲಿ ಸಮಾಜದ ಉನ್ನತ ಸ್ಥಾನಕ್ಕೇರಿದ ಹಲವಾರು ಮಹನೀಯರು ನಮಗೆ ಸ್ಫೂರ್ತಿಯಾಗಬೇಕು. ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಲು ಪೂರಕವಾದ ವೇದಿಕೆಗಳನ್ನು ಕಲ್ಪಿಸುವ ಮೂಲಕ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯವಾಗಬೇಕಿದೆ ಎಂದರು. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಈಡಿಗ ಸಮುದಾಯ ಕಡಿಮೆ ಸಂಖ್ಯೆಯಲ್ಲಿದ್ದರೂ ಜಾಲಪ್ಪ ಅವರಂತಹ ಪ್ರಬಲ ನಾಯಕರನ್ನು ರಾಜಕೀಯ ಕ್ಷೇತ್ರಕ್ಕೆ ನೀಡಿದೆ. ಅವರ ಸಾಮಾಜಿಕ ಸೇವೆ ಅನನ್ಯವಾದದ್ದು. ಈಡಿಗ ಜನಾಂಗದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಗುರುಸ್ವಾಮಿ ಅಂತಹ ಮಹನೀಯರು ಮಾಡಿರುವ ಸೇವೆ ಸ್ಮರಿಸಬೇಕಿದೆ ಎಂದರು.ಶಾಸಕ ಧೀರಜ್ ಮುನಿರಾಜು ಮಾತನಾಡಿ, ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜ ಸುಧಾರಿಸುತ್ತದೆ. ಇಂದು ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಕಾಲೇಜು ಶುಲ್ಕಗಳು ದುಬಾರಿಯಾಗಿದ್ದು, ಬಡ ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ. ಈ ದಿಸೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಾಲೇಜು ಶುಲ್ಕವನ್ನು ಭರಿಸುವ ಕುರಿತು ಸದನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಒಂದು ಸಮುದಾಯ ಮುಖ್ಯವಾಹಿನಿಗೆ ಬರಲು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬೇಕಿದೆ. ಹಿಂದುಳಿದ ಈಡಿಗ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದರು.ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ವಿದ್ಯಾರ್ಥಿ ವೇತನ ಹಾಗೂ ಶಿಕ್ಷಣ ಪರಿಕರಗಳನ್ನು ವಿತರಿಸಲಾಯಿತು.
ಕರ್ನಾಟಕ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಉಪಾಧ್ಯಕ್ಷ ಜೆ.ರಾಜೇಂದ್ರ, ಈಡಿಗ ಯುವ ಸಂಘದ ಅಧ್ಯಕ್ಷ ಕೆ.ಜಿ.ಶ್ರೀನಿವಾಸ ಮೂರ್ತಿ, ಗೌ.ಅಧ್ಯಕ್ಷ ಎನ್.ಸುನೀಲ್ ಕುಮಾರ್, ಮುಖಂಡರಾದ ಟಿ.ಶಿವಕುಮಾರ್, ಪ್ರಕಾಶ್, ಶಾಂತ ರಾಜ್ ಕುಮಾರ್, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಜಿಪಂ ಮಾಜಿ ಸದಸ್ಯ ಎನ್. ಅರವಿಂದ್, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಎಸ್.ಸುಮನ, ಕರ್ನಾಟಕ ಪ್ರದೇಶ ಆರ್ ಈಡಿಗ ಯುವ ಸಂಘದ ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್.ರವಿಕಿರಣ್, ಜೆ.ಕುಮಾರ್, ಡಿ.ರಘು ಉಪಸ್ಥಿತರಿದ್ದರು.ಫೋಟೋ- 23ಕೆಡಿಬಿಪಿ1
ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.