ಸಾರಾಂಶ
ಕನಕಪುರ: ಕೃಷಿ ಕೂಡ ಈಗ ಉದ್ಯಮವಾಗಿದ್ದು, ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವ ಕೃಷಿ ಕ್ಷೇತ್ರದತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನಕಪುರದಲ್ಲಿ ಶ್ರೀ ಎಸ್.ಕರಿಯಪ್ಪ ಕೃಷಿ ಕಾಲೇಜು ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, , ನಮ್ಮ ಜಿಲ್ಲೆ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಜೊತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂ ಬೆಳೆಯುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದಾಗಿದೆ. ನೀವು ಕೇವಲ ಡಾಕ್ಟರ್, ಎಂಜಿನಿಯರ್ ಆಗುವುದಷ್ಟೇ ಗುರಿಯಾಗಿಸಿಕೊಳ್ಳದೇ ನೀವೇ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವ ಕೃಷಿಯತ್ತ ಮನಸ್ಸು ಮಾಡಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗ ಎಂದು ತಿಳಿಸಿದರು.ಕನಕಪುರದಲ್ಲಿ ನಾವು ಸ್ಥಾಪಿಸಿರುವ ಹಾಲಿನ ಡೇರಿ ದೇಶಕ್ಕೆ ಮಾದರಿ ಸಂಸ್ಥೆಯಾಗಿದ್ದು, ಅಮೂಲ್ ಉತ್ಪನ್ನದ ಜತೆಗೆ ಸ್ಪರ್ಧೆ ಮಾಡುವ ಸಂಸ್ಥೆಯಾಗಿ ಬೆಳೆದಿದೆ, ನಂದಿನಿ ತುಪ್ಪ ತಿರುಪತಿ ಲಡ್ಡು ಪ್ರಸಾದಕ್ಕೆ ರವಾನೆಯಾಗುತ್ತಿದೆ, ನಮ್ಮ ತಾಲೂಕು ಸಿಲ್ಕ್ ಹಾಗೂ ಮಿಲ್ಕ್ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೆಂಗಳೂರಿನಿಂದ ರಾಜೀವ್ ಗಾಂಧಿ ವಿವಿಯನ್ನು ನಮ್ಮ ಸರ್ಕಾರ ಬೆಂಗಳೂರು ದಕ್ಷಿಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ, ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಹುಡುಕಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಅಂತೆಯೇ ನಾವು ಅವಕಾಶಗಳನ್ನು ಸೃಷ್ಟಿಸಬೇಕು, ಈಗಿನ ಕಾಲದಲ್ಲಿ ಯುವಕರು ತಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲೇ ವಿಶ್ವದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಮಕ್ಕಳು ತಮ್ಮ ಮುಂದಿನ ಜೀವನಕ್ಕೆ ತಾವೇ ಬುನಾದಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆಯ ಮೇಲೆ ಇರಬಾರದು, ಇಡೀ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಡೆಸಬೇಕು, ಅವರೇ ಸ್ವಾಗತ ಭಾಷಣ ಮಾಡಬೇಕು, ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ, ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ ಎಂದರು.ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಶಾಲಾ ಮಕ್ಕಳ ಕೈಯಿಂದ ಕಾರ್ಯಕ್ರಮವನ್ನು ಮಾಡಿಸುವಂತೆ ತಿಳಿಸುತ್ತೇನೆ. ಮಕ್ಕಳ ದಿನಾಚರಣೆಯಂದು ವಿಧಾನಸೌಧದಲ್ಲಿ ಸಂವಾದ ಕಾರ್ಯಕ್ರಮ ಮಾಡಿದ್ದೆ, ಆಗ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಸರ್ಕಾರವೇ ಅಚ್ಚರಿಪಟ್ಟಿತು. ನೀವು ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣ ನೀಡಿದ್ದೀರಿ, ಹೀಗಾಗಿ ನಮ್ಮ ತಾಯಿ ಎಲ್ಲಿಗೆ ಹೋದರೂ ನನ್ನ ಸಹೋದರಿಯರನ್ನು ಕರೆದುಕೊಂಡು ಹೋಗುತ್ತಾರೆ. ನನ್ನನ್ನು ಮನೆಯಲ್ಲೇ ಬಿಟ್ಟು ಹೋಗುತ್ತಾರೆ, ನಮ್ಮ ಕಥೆ ಏನು ಎಂದು ಕೇಳಿದ. ಆತ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ, ಈಗಿನ ಮಕ್ಕಳ ಆಲೋಚನಾ ಶಕ್ತಿಗೆ ಆತನ ಪ್ರಶ್ನೆ ಸಾಕ್ಷಿಯಾಗಿದೆ ಎಂದರು.
ನಾವು ನೀವೆಲ್ಲ ರೈತರ ಮಕ್ಕಳು. ಹುಳಿ ಪೆಟ್ಟು ಬೀಳದೇ ಯಾವುದೇ ಕಲ್ಲು ಶಿಲೆಯಾಗುವುದಿಲ್ಲ. ನೆಲ ಉಳುಮೆ ಮಾಡದೇ ಯಾವ ಜಮೀನು ಮಟ್ಟವಾಗುವುದಿಲ್ಲ. ಅದೇ ರೀತಿ ನೀವು ಶ್ರಮ ಪಡಬೇಕು. ಶ್ರಮ ಇದ್ದರೆ ಯಶಸ್ಸು ಸಾಧ್ಯ. ವಿದ್ಯೆ ಬಹಳ ಮುಖ್ಯ,ನಾನು ಬಹಲ ಚಿಕ್ಕ ವಯಸ್ಸಿ ನಲ್ಲೇ ರಾಜಕೀಯಕ್ಕೆ ಬಂದೆ, ನಾನು ಪದವಿ ಪಡೆದಿರಲಿಲ್ಲ. 47ನೇ ವಯಸ್ಸಿನಲ್ಲಿ ಪದವಿ ಪಡೆದೆ ನಾನು 1990ರಲ್ಲೇ ಬಂಗಾರಪ್ಪ ಅವರ ಸರ್ಕಾರದಲ್ಲಿ ಸಚಿವನಾಗಿದ್ದೆ, ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಂಪುಟ ಸಚಿವನಾದೆ ಆಗ ಆಗಿದ್ದ ಸಂತೋಷಕ್ಕಿಂತ ನಾನು ಪದವಿ ಪಡೆದಾಗ ಹೆಚ್ಚು ಸಂತೋಷವಾಗಿತ್ತು ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.ಪ್ರತಿಭೆ ಸೋತರೂ ಪರಿಶ್ರಮ ಗೆದ್ದೇ ಗೆಲ್ಲುತ್ತದೆ, ಹೀಗಾಗಿ ನಿಮ್ಮ ಪರಿಶ್ರಮ ಅಗತ್ಯ,ನಿಮ್ಮಿಂದ ಸಾಧ್ಯವಾಗದಿರುವು ದು ಯಾವುದೂ ಇಲ್ಲ, ನೀವು ಕನಸು ಕಾಣಬೇಕು, ಕನಸು ನನಸಾಗಿಸಲು ಹಂಬಲಿಸಬೇಕು ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್. ರವಿ. ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಆರ್ ಇ ಎಸ್ ಸಂಸ್ಥೆ ಅಧ್ಯಕ್ಷ ಎಚ್. ಕೆ. ಶ್ರೀಕಂಠು, ಕೃಷಿ ಕಾಲೇಜು ಡೀನ್ ಸಿದ್ದರಾಮಯ್ಯ, ಆಡಳಿತಾಧಿಕಾರಿ ಪುಟ್ಟರಾಜು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.ಕೆ ಕೆ ಪಿ ಸುದ್ದಿ 06:
ಕನಕಪುರದಲ್ಲಿ ಕೃಷಿ ಕಾಲೇಜು ಉದ್ಘಾಟನೆ ಮಾಡಿದ ಡಿಸಿಎಂ ಡಿಕೆಶಿ.