ಸಿ.ಕೆ. ನಾಗರಾಜ
ಹೊಸಪೇಟೆ: ಜಿಲ್ಲೆಯ ರೈತರು ಈಗಾಗಲೇ ಹಿಂಗಾರು ಕೃಷಿ ಚಟುವಟಿಕೆ ಮುಗಿಸಿದ್ದು, ದನಕರುಗಳಿಗೆ ಮೇವು ಸಂಗ್ರಹ ಕಾರ್ಯ ಜೋರಾಗಿದೆ.ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ರೈತರು ಭತ್ತದ ಹುಲ್ಲು, ಶೇಂಗಾ ಹೊಟ್ಟು, ಜೋಳದ ದಂಟು ಸೇರಿದಂತೆ ಇತರೆ ಮೇವನ್ನು ಹತ್ತಾರು ಕಿ.ಮೀ. ದೂರದಿಂದ ತರುತ್ತಿದ್ದಾರೆ. ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ತಂದು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರೈತರು, ದನ-ಕರುಗಳನ್ನು ಕಟ್ಟಿಕೊಂಡಿರುವುದರಿಂದ ಅವುಗಳಿಗೆ ಮೇವು ಒದಗಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಮೇವಿನ ಕೊರತೆ ಹಾಗೂ ಆರ್ಥಿಕ ಅಸಹಾಯಕತೆ ನಡುವೆ ಜಾನುವಾರುಗಳನ್ನು ಹೇಗೆ ಸಾಕಬೇಕೆಂಬ ಚಿಂತೆ ರೈತರಿಗೆ ನಿತ್ಯ ಕಾಡುವ ಸಮಸ್ಯೆಯಾಗಿದೆ.ಈಗಾಗಲೇ ನೀರಾವರಿ ಪ್ರದೇಶದಲ್ಲಿ ಶೇಂಗಾ ಮತ್ತು ಭತ್ತ ಕಟಾವು ನಡೆಯುತ್ತಿದೆ. ರೈತರು ತಮ್ಮ ಜಾನುವಾರುಗಳಿಗಾಗಿ ಶೇಂಗಾ ಹೊಟ್ಟು, ಭತ್ತದ ಹುಲ್ಲು ಸೇರಿದಂತೆ ಇತರೆ ಮೇವು ಸಂಗ್ರಹಿಸಿ ತಮ್ಮ ಹೊಲ ಮತ್ತು ಮನೆಗಳ ಬಳಿ ಬಣವಿ ಒಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಮೇವು ದುಬಾರಿಯಾಗಿದೆ. ಕಳೆದ ವರ್ಷ ಟ್ರ್ಯಾಕ್ಟರ್‌ಗೆ ₹10 ಸಾವಿರದಿಂದ ₹12 ಸಾವಿರವಿದ್ದ ಶೇಂಗಾ ಹೊಟ್ಟು ಈ ಬಾರಿ ₹12 ಸಾವಿರದಿಂದ ₹15 ಸಾವಿರವಾಗಿದೆ. ಮೇವು ದುಬಾರಿಯಾದರೂ ಜಾನುವಾರು ಹೊಂದಿರುವ ರೈತರು ದುಬಾರಿ ಮೇವು ತೆಗೆದುಕೊಂಡು ಜಾನುವಾರು ಸಾಕುವ ಅನಿವಾರ್ಯತೆ ಉಂಟಾಗಿದೆ.
ಎತ್ತಿನಬಂಡಿಗೆ ₹5 ಸಾವಿರ, ಟ್ರ್ಯಾಕ್ಟರ್‌ಗೆ ₹10-15 ಸಾವಿರ ನೀಡಿದರೂ ಮೇವು ಸಿಗುತ್ತಿಲ್ಲ. ದುಬಾರಿ ಮೇವು ಖರೀದಿಸಲು ರೈತರು ಪರದಾಡುತ್ತಿದ್ದಾರೆ. ಭೂಮಿ ಇದ್ದವರೂ ನಮ್ಮ ದನಕರುಗಳಿಗೆ ಮೇವು ಸಾಲುತ್ತಿಲ್ಲ. ಹೀಗಾಗಿ ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಭೂಮಿ ಇಲ್ಲದವರು ಮೇವು ಖರೀದಿಸಲು ಆಗದೆ, ದನಕರುಗಳನ್ನು ಮಾರಾಟ ಮಾಡಲೂ ಆಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
ಇತ್ತೀಚಿನ ದಿನಗಳಳ್ಲಿ ಕೃಷಿ ಕೆಲಸಗಳಿಗೆ ಎತ್ತುಗಳ ಬದಲಾಗಿ ಟ್ರ್ಯಾಕ್ಟರ್, ಯಂತ್ರಗಳನ್ನು ಬಳಸುತ್ತಿದ್ದಾರೆ. ಹೊಸ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಜಾನುವಾರು ಸಾಕಾಣಿಕ ಕಡಿಮೆಯಾಗುತ್ತಿದೆ. ಆದರೆ, ರೈತರಿಗೆ ಎತ್ತುಗಳಿಂದ ಕೃಷಿ ಮಾಡಿದರೆ ಖುಷಿ. ಎತ್ತುಗಳಿಂದ ಕೃಷಿ ಮಾಡಿದಂಗ ಟ್ರ್ಯಾಕ್ಟರ್‌ನಿಂದ ಆಗುವುದಿಲ್ಲ. ಹೀಗಾಗಿ, ಎತ್ತುಗಳ ಜೊತೆಗೆ ದನ ಕರುಗಳಿಗೆ ಮೇವು ಖರೀದಿಸಿ ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ ಮರಿಯಮ್ಮನಹಳ್ಳಿಯ ರೈತ ಹುಲುಗಪ್ಪ.