ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ
ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಳ್ಳೆ ಔಷಧಿ ಸಿಂಪಡಣೆ(ಫಾಗಿಂಗ್) ಕಾರ್ಮಿಕರು (ಎಂ.ಸಿ.ಗ್ಯಾಂಗ್ ಮೆನ್) ಬಾಕಿ ವೇತನಕ್ಕಾಗಿ ಬ್ಯಾಟರಾಯನಪುರದಲ್ಲಿರುವ ಬಿಬಿಎಂಪಿ ಯಲಹಂಕ ವಲಯ ಕಚೇರಿ ಮುಂದೆ ಧರಣಿ ನಡೆಸಿದರು.ದಲಿತ ಸಂಘರ್ಷ ಸಮಿತಿಯ (ಕೆಂಪುಸೇನೆ) ರಾಜ್ಯ ಕಾರ್ಯದರ್ಶಿ ಡಿ.ವಿ.ವೀರಭದ್ರೇಗೌಡ ನೇತೃತ್ವದಲ್ಲಿ ಕಾರ್ಮಿಕರು ಜಂಟಿ ಆಯುಕ್ತರನ್ನು ಭೇಟಿ ಮಾಡಿ ತಕ್ಷಣ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಡಿ.ವಿ.ವೀರಭದ್ರೇಗೌಡ, ಬಿಬಿಎಂಪಿ ಯಲಹಂಕ ವಲಯ ಕಚೇರಿ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ 24 ಸೊಳ್ಳೆ ಔಷಧಿ ಸಿಂಪಡಣೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸಾದ್ ಮತ್ತು ಇತರರು 2 ವರ್ಷಗಳ ಅವಧಿಗೆ ಬಿಬಿಎಂಪಿಯಿಂದ ಔಷಧಿ ಸಿಂಪಡಣೆ ಗುತ್ತಿಗೆ ಪಡೆದಿದ್ದಾರೆ. ಆದರೆ ಕಾರ್ಮಿಕರಿಗೆ ತಿಂಗಳಿಗೆ ಸರಿಯಾಗಿ ವೇತನ ಪಾವತಿಸಿಲ್ಲ. ಇದರಿಂದ ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಹಣವಿಲ್ಲ ಎಂದು ದೂರಿದರು.ಕಾರ್ಮಿಕರು ಪ್ರತಿ 6-8 ತಿಂಗಳಿಗೊಮ್ಮೆ ಬಾಕಿ ವೇತನ ಬಿಡುಗಡೆಯ ಸಂಬಂಧ ಪ್ರಶ್ನಿಸಿದಾಗ ಮಾತ್ರ 2-3 ತಿಂಗಳ ವೇತನ ಪಾವತಿಸುವ ಗುತ್ತಿಗೆದಾರರು, ಪೂರ್ತಿ ವೇತನ ನೀಡುತ್ತಿಲ್ಲ. 11 ತಿಂಗಳಿನಿಂದ ವೇತನ ನೀಡಿಲ್ಲ, ಗುತ್ತಿಗೆದಾರರು ಇಎಸ್ಐ ಕಚೇರಿಗೆ ಹಣ ಪಾವತಿಸದ ಕಾರಣ ಕಾರ್ಮಿಕರಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ನಿಯಮದ ಅಡಿಯಲ್ಲಿ ತಿಂಗಳಿಗೆ ₹18 ಸಾವಿರ ವೇತನ ನೀಡಬೇಕು ಆದರೆ ಕೇವಲ ₹12 ಸಾವಿರ ನೀಡುತ್ತಿದ್ದು, ಅದನ್ನೂ ಸಹ ಸರಿಯಾಗಿ ನೀಡದೆ ಸತಾಯಿಸುತ್ತಿದ್ದಾರೆ. ಔಷಧಿ ಸಿಂಪಡಣೆ ಮಾಡಲು ಮಾಸ್ಕ್, ಗ್ಲೌಸ್, ಸಮವಸ್ತ್ರ, ಶೂ ಸೇರಿದಂತೆ ಸಂರಕ್ಷಣಾ ಸೌಕರ್ಯಗಳನ್ನು ಒದಗಿಸಿಲ್ಲ. ಈ ಬಗ್ಗೆ ಆರೋಗ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಕಳೆದ ಒಂದು ವರ್ಷದಿಂದಲೂ ಸಬೂಬು ಹೇಳುತ್ತಿದ್ದಾರೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.ಒಂದು ವಾರದೊಳಗಾಗಿ ಬಾಕಿ ಇರುವ ವೇತನ ಪಾವತಿಸುವುದರ ಜತೆಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಬ್ಯಾಟರಾಯನಪುರದ ಬಿಬಿಎಂಪಿ ವಲಯ ಕಚೇರಿಯ ಮುಂಭಾಗದಲ್ಲಿ ಹೋರಾಟ ನಡೆಸುವುದಾಗಿ ಕಾರ್ಮಿಕರು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ(ಕೆಂಪುಸೇನೆ)ಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಎಂ.ಮುರಳಿ ಇದ್ದರು.ಇನ್ನೆರಡು ದಿನದಲ್ಲಿ ಸಮಸ್ಯೆ ಪರಿಹಾರಕಾರ್ಮಿಕರ ಮನವಿ ಆಲಿಸಿ ಪ್ರತಿಕ್ರಿಯಿಸಿರುವ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಮೊಹಮದ್ ನಯೀಮ್ ಮೋಮಿನ್, ಗುತ್ತಿಗೆದಾರರು ಪಿಎಫ್ ಮತ್ತು ಇಎಸ್ಐ ಹಣವನ್ನು ಸಂಬಂಧಪಟ್ಟ ಕಚೇರಿಗೆ ಪಾವತಿಸದ್ದಕ್ಕೆ ಬಿಲ್ ತಡೆ ಹಿಡಿಯಲಾಗಿದೆ. ಮೊದಲು ಬಿಲ್ ಮಂಜೂರು ಮಾಡಿ, ನಂತರ ಹಣವನ್ನು ಕಚೇರಿಗೆ ಪಾವತಿಸುತ್ತೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದು, ನಿಯಮದ ಪ್ರಕಾರ ಈ ರೀತಿ ಮಾಡಲು ಅವಕಾಶವಿಲ್ಲ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸಿ, ಕಾರ್ಮಿಕರ ವೇತನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.