ಸಾರಾಂಶ
ಗ್ರಾಮದ ಬೆಟ್ಟಗುಡ್ಡಗಳ ಹಾಗೂ ಐತಿಹಾಸಿಕ ಸ್ಮಾರಕಗಳ ನಡುವೆ ಇಳಿ ಸಂಜೆ ವೇಳೆ ಸೂರ್ಯ ಮರೆಯಾಗುತ್ತಿದ್ದಂತೆ, ಇತ್ತ ಗುಡೇಕೋಟೆಯ ಪ್ರಮುಖ ಬೀದಿಯಲ್ಲಿ ಜಾನಪದ ಕಲಾಲೋಕವೇ ಮೇಳೈಸಿತು.
ಶೋಭಾಯಾತ್ರೆಯುದ್ದಕ್ಕೂ ಸಂಭ್ರಮಿಸಿದ ಜನತೆ । ಮೆರುಗು ತಂದ ಎತ್ತಿನಗಾಡಿ ಮತ್ತು ಸ್ಥಬ್ಧ ಚಿತ್ರಗಳುಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಗ್ರಾಮದ ಬೆಟ್ಟಗುಡ್ಡಗಳ ಹಾಗೂ ಐತಿಹಾಸಿಕ ಸ್ಮಾರಕಗಳ ನಡುವೆ ಇಳಿ ಸಂಜೆ ವೇಳೆ ಸೂರ್ಯ ಮರೆಯಾಗುತ್ತಿದ್ದಂತೆ, ಇತ್ತ ಗುಡೇಕೋಟೆಯ ಪ್ರಮುಖ ಬೀದಿಯಲ್ಲಿ ಜಾನಪದ ಕಲಾಲೋಕವೇ ಮೇಳೈಸಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಮತ್ತು ಕಲಾತಂಡಗಳು ಸಾಂಸ್ಕೃತಿಕ ಜಾನಪದ ಲೋಕ ಸೃಷ್ಟಿಸಿದರು.ಶಿವಪಾವರ್ತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕಾಲೇಜ್ ಆವರಣದ ಒನಕೆ ಓಬವ್ವ ವೇದಿಕೆವರೆಗೆ ನಡೆಯಿತು. ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭಿರ್ಯದಿಂದ ಎತ್ತಿನಗಾಡಿಗಳು ಹೆಜ್ಜೆ ಹಾಕಿದವು, ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ತಾಯಿ ಭುವನೇಶ್ವರಿ, ಒನಕೆ ಓಬವ್ವನ ಮತ್ತು ಗ್ರಾಮ ಪರಿಸರದಲ್ಲಿರುವ ಸ್ಮಾರಕಗಳು ಮತ್ತು ಕರಡಿಧಾಮದಲ್ಲಿರುವ ವನ್ಯಜೀವಿಗಳ ಸ್ಥಬ್ಧ ಚಿತ್ರಗಳ ಹಿಂದೆ ಸಾಗಿತು.
ಮೆರವಣಿಗೆಯಲ್ಲಿ ಚೌಡಪುರದ ಮಲ್ಲಿಕಾರ್ಜುನ ತಂಡದ ಸಮಾಳ, ನಂದಿದ್ವಜ ಕುಣಿತ, ಮಂಜುನಾಥ, ಈಶ್ವರಪ್ಪ ತಂಡದಿಂದ ಕೋಲಾಟ, ಓಬಳೇಶ್, ರಾಮಚಂದ್ರ, ರಾಮಣ್ಣ ಬಸಪ್ಪ ತಂಡಗಳ ವಾದ್ಯಗಳು ಮೆರುಗು ತಂದರೆ, ಇಮಡಾಪುರದ ಲಕ್ಷ್ಮೀ ಮಹಿಳಾ ತಂಡದ ಉರುಮೆ ವಾದ್ಯಗಳ ವಾದನವು ಜನರಿಗೆ ಹುರುಪು ತಂದಿತ್ತು. ಉಡುಪಿ ಹೃತಿಕ್ ತಂಡದವರ ಹುಲಿವೇಶ ಕುಣಿತ, ಸಿಡೇಗಲ್ಲು ರಾಜು ತಂಡವರ ಚೌಡಿಕಿ ವಾದನ ಹಾಗು ಹಂಪಾಪಟ್ಟಣ ನಾಗರಾಜ ಗಂಟೆ ತಂಡ ಜಾನಪದ ಕೈಚಳವು ಬೆರಗು ಮೂಡಿಸಿತು. ಓಬಳಾಪುರ ಓಬಣ್ಣ ಮತ್ತು ಗುಡೇಕೋಟೆ ಸಿದ್ದಮೂರ್ತಿ ತಂಡದ ಹಲಗೆವಾದನ, ಕುದುರೆಡವು ರಾಜಣ್ಣ ಮತ್ತು ಮಾರಬನಹಳ್ಳಿ ಮಾರಪ್ಪರಿಂದ ಉರಿಮೆವಾದನ, ಹರಪನಹಳ್ಳಿ ಮೂರ್ತಿ ಮತ್ತು ಕೂಡ್ಲಿಗಿ ಬಿಕ್ಷಾವತಿ ತಂಡದಿಂದ ಹಗಲುವೇಷಗಾರರ ಕುಣಿತ, ಬೆಳ್ಳಕಟ್ಟೆ ಸಿದ್ದಪ್ಪ ತಂಡದ ಕಹಳೆ, ಸಿಡೇಗಲ್ಲು ಹೊನ್ನೂರಸ್ವಾಮಿ ತಂಡದಿಂದ ಚೌಡಿಕೆ ವಾದನ, ಶ್ರೀಧರ್ ಆಚಾರ್ ಅವರ ತಂಡದ ರಾಮಡೊಳ್ಳು, ಗೊಂಬೆ ಕುಳಿತ, ತಾಲೂಕಿನ ೧೦ಕೋಲಾಟ ತಂಡದಿಂದ ಗ್ರಾಮೀಣ ಭಾಗದ ಪ್ರಮುಖ ಕೋಲಾಟ ನೃತ್ಯವು ಜಾನಪದ ಕುಣಿತವು ಶೋಭಾಯಾತ್ರೆಗೆ ಮೆರುಗು ತಂದವು. ಅಲ್ಲದೆ, ಶೋಭಾಯತ್ರೆ ಒಟ್ಟು ೪೮ ಕಲಾ ತಂಡಗಳು ಭಾಗವಹಿಸಿದ್ದರು. ಮೆರವಣಗೆಯಲ್ಲಿ ಗ್ರಾಮದ ೨೦ಕ್ಕೂ ಹೆಚ್ಚು ರೈತರು ತಮ್ಮ ಎತ್ತಿನಗಾಡಿಗೆ ಸಿಂಗಾರ ಮಾಡಿಕೊಂಡು ಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ನೂರಾರು ಮಹಿಳೆಯರು ಭಾವೈಕ್ಯದೊಂದಿಗೆ ಪೂರ್ಣಕುಂಭ ಹೊತ್ತು ಸಾಗಿದ್ದು, ಇಡೀ ಶೋಭಾಯಾತ್ರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಿದವು.ಜಾನಪದ ಕಲಾ ಮೆರವಣಿಗೆಗೆ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಚಾಲನೆ ನೀಡಿದರು. ನಂತರ ಎತ್ತಿನ ಗಾಡಿಯಲ್ಲಿ ಮೆರವಣಿಗೆಯೂದ್ದಕ್ಕೂ ಸಾಗಿದರು. ಈ ಸಂದರ್ಭ ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ನರಸಪ್ಪ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಎನ್.ಟಿ. ತಮ್ಮಣ್ಣ, ಕೆಇಬಿ ಗೋವೀಂದಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಮುಖಂಡರು ಹೆಜ್ಜೆ ಹಾಕಿದರು.