ಜಾನಪದ ಕಲೆಯಿಂದ ಮನಸ್ಸು ಉಲ್ಲಾಸವಾಗುತ್ತದೆ. ಇಲ್ಲಿಯ ಜಾನಪದ ಕಲೆಯು ದೇಶ- ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದಿಸೆಯಲ್ಲಿ ಶರಣ, ಕಾಯಕ ಜೀವಿ ನುಲಿ ಚಂದಯ್ಯವನವರ ಹೆಸರಿನಲ್ಲಿ ಜಾನಪದ ಮೇಳವನ್ನು ರಚಿಸಿಕೊಂಡು ಜಾನಪದ ಕಲೆಯನ್ನು ಬೆಳೆಸಲು ಶ್ರಮಿಸುತ್ತಿರುವುದು ಕಾರ್ಯ ಶ್ಲಾಘನೀಯ.

ಗದಗ: ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಅನಾವರಣಗೊಳಿಸುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು ತಿಳಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ನುಲಿ ಚಂದಯ್ಯ ಜಾನಪದ ಕಲಾ ಮೇಳ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಯು ನಮ್ಮ ಜೀವನ ಶೈಲಿ, ನಡೆ, ನುಡಿಗಳನ್ನು ತಿದ್ದುವ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಜಾನಪದ ಕಲೆಯಿಂದ ಮನಸ್ಸು ಉಲ್ಲಾಸವಾಗುತ್ತದೆ. ಇಲ್ಲಿಯ ಜಾನಪದ ಕಲೆಯು ದೇಶ- ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದಿಸೆಯಲ್ಲಿ ಶರಣ, ಕಾಯಕ ಜೀವಿ ನುಲಿ ಚಂದಯ್ಯವನವರ ಹೆಸರಿನಲ್ಲಿ ಜಾನಪದ ಮೇಳವನ್ನು ರಚಿಸಿಕೊಂಡು ಜಾನಪದ ಕಲೆಯನ್ನು ಬೆಳೆಸಲು ಶ್ರಮಿಸುತ್ತಿರುವುದು ಕಾರ್ಯ ಶ್ಲಾಘನೀಯ ಎಂದರು.ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಮಾತನಾಡಿ, ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲದಲ್ಲಿ ಜನಪದವು ಮರೆಮಾಚುತ್ತಿದೆ. ಈ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ನುಲಿ ಚಂದಯ್ಯ ಜಾನಪದ ಮೇಳ ಕಾರ್ಯಕ್ಕೆ ಗ್ರಾಮಸ್ಥರು ಪ್ರೊತ್ಸಾಹ ನೀಡಬೇಕು ಎಂದರು.

ಜಿಲ್ಲಾ ಎಸ್ಸಿ, ಎಸ್ಟಿ ಸಲಹಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಬಸವರಾಜ ಮುಳ್ಳಾಳ ಮಾತನಾಡಿ, ಯುವಕರು ಮೊಬೈಲ್ ಮತ್ತು ಟಿವಿ ಮಾಧ್ಯಮದಿಂದ ದೂರವಿದ್ದು ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಗೌರವಿಸುವ ಜಾನಪದ ಕಲೆಯ ಮಹತ್ವವನ್ನು ಅರಿಯಬೇಕು ಎಂದರು.ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಭಕ್ತಿ ಸಂಗೀತ, ದೀಪ ನೃತ್ಯ, ಸುಗಮ ಸಂಗೀತ, ಡೊಳ್ಳಿನ ಪದ, ಕೋಲಾಟ, ಜನಪದ ಸಂಗೀತ, ತತ್ವಪದ, ಮಲ್ಲಕಂಬ, ಜೋಗುತಿ ನೃತ್ಯ, ಭಜನೆ, ಗೀ ಗೀ ಪದ ಕಾರ್ಯಕ್ರಮಗಳು ಜನಮನ ಸೆಳೆದವು. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು.

ಚನ್ನಬಸಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ದೇವಪ್ಪ ಖಂಡು, ಕುಶ ಕವಲೂರು, ಗ್ರಾಪಂ ಮಾಜಿ ಸದಸ್ಯ ಲಕ್ಷ್ಮಣ ಗುಡಸಲಮನಿ, ಶಿವಪ್ಪ ಬಳಿಗೇರ, ಪ್ರಕಾಶ ಅರಹುಣಶಿ, ತಿಪ್ಪಣ್ಣ ಅಂಬಕ್ಕಿ, ಮಹಾಂತೇಶ ಗುರಿಕಾರ, ಬಸವರಾಜ ಬಳಿಗೇರ, ಸಿದ್ದಣ್ಣ ಮಂಗಳೂರು, ವಿನಾಯಕ ಡಿಗ್ಗಾವಿ ಇದ್ದರು. ನುಲಿ ಚಂದಯ್ಯ ಜಾನಪದ ಕಲಾ ಮೇಳದ ಅಧ್ಯಕ್ಷ ಶಿವಪ್ಪ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಸಿ. ಕುಂಬಾರ ಸ್ವಾಗತಿಸಿದರು. ಶಿಕ್ಷಕ ಮುತ್ತುರಾಜ್ ಗಡ್ಡಿ ನಿರೂಪಿಸಿದರು. ಕೊಟ್ರಯ್ಯ ನಾಗಾವಿಮಠ ವಂದಿಸಿದರು.