ಜಾನಪದ ಕಲೆ ಪರಿಶಿಷ್ಟರ ರಕ್ತದಲ್ಲೇ ಇದೆ

| Published : Feb 25 2025, 12:48 AM IST

ಜಾನಪದ ಕಲೆ ಪರಿಶಿಷ್ಟರ ರಕ್ತದಲ್ಲೇ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಕಲೆಯು ಗ್ರಾಮೀಣ ಭಾಗದ ಬಡವರು ಹಿಂದುಳಿದವರು ಹಾಗೂ ದಲಿತರಲ್ಲಿ ಉಳಿದಿದೆ. ಆಗಾಗಿ ಈ ಕಲೆಯನ್ನು ತಮ್ಮ ಯುವ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಲು, ಅವರಿಗೂ ಕಲಿಸಬೇಕು. ಇಂದಿನ ಕಲೆಗಳಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜಾನಪದ ಹಾಡುಗಳನ್ನು ಕಲಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಕೋಲಾರ

ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಇಂದಿನ ಕಲೆಗಳಲ್ಲಿ ಸಂಸ್ಕೃತಿ ಇಲ್ಲ

ಜಾನಪದ ಕಲೆಯು ಗ್ರಾಮೀಣ ಭಾಗದ ಬಡವರು ಹಿಂದುಳಿದವರು ಹಾಗೂ ದಲಿತರಲ್ಲಿ ಉಳಿದಿದೆ. ಆಗಾಗಿ ಈ ಕಲೆಯನ್ನು ತಮ್ಮ ಯುವ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಲು, ಅವರಿಗೂ ಕಲಿಸಬೇಕು. ಇಂದಿನ ಕಲೆಗಳಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜಾನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ, ಕೋಲಾಟ, ಭಜನೆ ಪದಗಳನ್ನು ಕುಳಿತು ಕೇಳಬಹುದಾಗಿತ್ತು. ಈಗ ಇಂತಹ ಕಲೆಗಳು ನಶಿಸುತ್ತಿದ್ದು, ಕಲವಿದರಾದ ತಾವು ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು. ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದಲೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೀಸಲಾತಿ ಪಡೆದುಕೊಂಡು ಕೆಳ ಮಟ್ಟದ ಸಮುದಾಯಗಳು ಮುನ್ನಡೆಯುತ್ತಿದೆ. ನಮಗೆ ಕಾಣದೆ ಇರುವ ದೇವರು ಅಂಬೇಡ್ಕರ್. ಅದನ್ನು ನಾವು ಕೇವಲ ಬಾಯಿಂದ ಹೇಳುವುದಲ್ಲ ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೀಸಲಾತಿ ತೆಗೆಯುವುದಿಲ್ಲ

ಕೆಲವರು ಮೀಸಲಾತಿ ಬಗ್ಗೆ ಅರಿವು ಇಲ್ಲದವರು ಮೀಸಲಾತಿ ತೆಗೆಯಬೇಕು ಎಂದು ಹೇಳುತ್ತಾರೆ, ಆದರೆ ಯಾವುದೇ ಕಾರಣಕ್ಕೂ ಮೀಸಲಾತಿ ತೆಗೆಯುವುದಿಲ್ಲ, ಯಾವತ್ತೂ ಸಮಾಜದಲ್ಲಿ ತುಳಿತಕ್ಕೆ ಒಳಗಾಗುವವರು, ಕೆಳಮಟ್ಟದಲ್ಲಿರುವವರು ಮಹಿಳೆಯರು. ಇವರು ಎಂದು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೂ ಅಲ್ಲಿಯವರೆಗೂ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ, ಆದ್ದರಿಂದ ನಾವೆಲ್ಲರೂ ಸೇರಿ ಸಮಸಮಾಜ ಕಟ್ಟುವ ಕೆಲಸ ಮಾಡೋಣ ಎಂದು ತಿಳಿಸಿದರು.

ಜಾನಪದ ಕಲೆ ಪರಿಶಿಷ್ಟರ ರಕ್ತದಲ್ಲೇ ಇದೆ

ಕೋಲಾರದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಸುಮಾರು ೯೩ ಲಕ್ಷ ರುಪಾಯಿ ಅನುದಾನ ಒದಗಿಸಲಾಗಿದೆ. ಪರಿಶಿಷ್ಟ ಜಾತಿ ವಿಶೇಷ ಘಟಕ ಅಡಿಯಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಜನಪದ ಕಲೆಗಳು ಅವರ ರಕ್ತದಲ್ಲಿಯೇ ಇರುತ್ತದೆ. ಆದ್ದರಿಂದ ಅವರನ್ನು ಪ್ರೋತ್ಸಾಹಿಸಿ ಆ ಕಲೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಕೋಲಾರದಲ್ಲಿ ಹಮ್ಮಿಕೊಂಡಿರುವುದಾಗಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಮ್ಮ ಕರ್ನಾಟಕದ ಇತಿಹಾಸದಲ್ಲಿಯೇ ವಿಶೇಷ ಘಟಕ ಯೋಜನೆಯಡಿ ಯಾರೂ ಕಾರ್ಯಕ್ರಮ ಮಾಡಿರಲಿಲ್ಲ. ಏಕೆಂದರೆ ನಮ್ಮ ರಾಜ್ಯದಲ್ಲಿ ಎಸ್.ಪಿ, ಟಿ.ಎಸ್.ಪಿ ಕಾನೂನು ಜಾರಿಗೆ ತಂದು ಪ್ರತಿಯೊಂದು ಇಲಾಖೆಗಳಿಂದಲೂ ಸಮುದಾಯದ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ದೇಶದಲ್ಲಿಯೇ ಇಂತಹ ಕಾರ್ಯಕ್ರಮ ಮೊದಲು ಜಾರಿಗೆ ತಂದಿದ್ದು ನಮ್ಮ ಸಿಎಂ ಸಿದ್ದರಾಮಯ್ಯ ಎಂದು ತಿಳಿಸಿದರು.

ವಿಶೇಷ ಘಟಕ ಯೋಜನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲಾವಿಧರಿಗೆ ಕಾರ್ಯಕ್ರಮ ನೀಡಿ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮ ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದೇವೆ. ಇವತ್ತಿನ ಈ ಕಾರ್ಯಕ್ರಮ ಮಾಡಲು ನಾವು ಸಂವಿಧಾನ ಕೊಟ್ಟ ಅಂಬೇಡ್ಕರ್ ಮತ್ತು ಎಸ್.ಪಿ/ಟಿ.ಎಸ್.ಪಿ. ಯೋಜನೆ ಜಾರಿಗೆ ತಂದಂತಹ ಸಿಎಂ ಸಿದ್ದರಾಮಯ್ಯರನ್ನು ನಾವು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಜಿ.ಕೆ.ವೆಂಕಟರೆಡ್ಡಿ, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ನಗರಸಭಾ ಅಧ್ಯಕ್ಷೆ ಕೆ.ಲಕ್ಷ್ಮೀದೇವಮ್ಮ ರಮೇಶ್, ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಲೋಕಸೇವಾ ಆಯೋಗದ ಸದಸ್ಯೆ ಕಾವಲಮ್ಮ, ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ನಿಖಿಲ್.ಬಿ. ಕೆಜಿಎಫ್ ಎಸ್ಪಿ ಶಾಂತರಾಜು, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಇದ್ದರು.