ಶ್ರೀಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಜಾನಪದ ಕಲೆ, ಸಂಗೀತ, ನೃತ್ಯ, ಸಂಸ್ಕೃತಿ ಮತ್ತು ಭಕ್ತಿಯ ಸೊಬಗು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಿದೆ. ಈ ಅದ್ಭುತವಾದ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜಾನಪದ ಕಲೆ ಎಂದರೆ ಅದು ಕೇವಲ ಮನರಂಜನೆಯಲ್ಲ. ಅದು ನಮ್ಮ ನೆಲದ ಮಣ್ಣಿನ ನೆನಪು ಜನರ ಬದುಕಿನ ಕಥೆ. ಸಮುದಾಯದ ಅನುಭವ ಹಾಗೂ ನಮ್ಮ ಸಂಸ್ಕೃತಿಯ ಜೀವಂತ ಅಭಿವ್ಯಕಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ ಅಭಿಪ್ರಾಪಟ್ಟರು.

ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ, ಶ್ರೀಗುರು ಸಂಸ್ಮರಣೋತ್ಸವ ಹಾಗೂ 47ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಜಾನಪದ ಕಲೆ, ಸಂಗೀತ, ನೃತ್ಯ, ಸಂಸ್ಕೃತಿ ಮತ್ತು ಭಕ್ತಿಯ ಸೊಬಗು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಿದೆ. ಈ ಅದ್ಭುತವಾದ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.

ಇಂದಿನ ದಿನಗಳಲ್ಲಿ ಬರೆದಿಟ್ಟ ಯಾವುದಾದರೂ ಕಲೆ, ಸಂಸ್ಕೃತಿಯನ್ನು ಉಳಿಸುವುದು ಬಹಳ ಕಷ್ಟ. ಆದರೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೂ ಹಾಡು, ಕುಣಿತ, ವಾದ್ಯ ಆಚರಣೆ ಮೂಲಕವೇ ಮೌಖಿಕ ಪರಂಪರೆಯಾಗಿ ದೊಡ್ಡ ಶಕ್ತಿಯಾಗಿ ನಿಂತಿರುವುದು ನಮ್ಮ ಜನಪದ ಕಲೆ ಮಾತ್ರ ಎಂದರು.

ಜಾನಪದ ಕಲೆ ಉಳಿಸುವುದೆಂದರೆ ಕೇವಲ ಕಲಾ ಪ್ರಕಾರವನ್ನು ಉಳಿಸುವುದಲ್ಲ. ನಮ್ಮ ಸಾಂಸ್ಕೃತಿಕ ಕೃತಿ, ಕಲಾವಿದರು ಮತ್ತು ಬೇರುಗಳನ್ನು ಉಳಿಸುವುದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ, ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಗಳ ಮೂಲಕ ಜಾನಪದ ಕಲೆಯನ್ನು ಉಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ನಾಳೆ ಚಿದಂಬರ ನೃತ್ಯೋತ್ಸವ

ಮಂಡ್ಯ:ಚಿದಂಬರನಟೇಶ ನಾಟ್ಯಶಾಲೆ ಟ್ರಸ್ಟ್ ವತಿಯಿಂದ ಚಿದಂಬರ ನೃತ್ಯೋತ್ಸವ ಕಾರ್ಯಕ್ರಮದಡಿ ಶಾಸ್ತ್ರೀಯ ಭರತನಾಟ್ಯ, ಹಿರಿಯ ಕಲಾವಿದರಿಗೆ ಗೌರವ ಸನ್ಮಾನ ಸೆ.೨೭ರಂದು ಸಂಜೆ ೫ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ನೆರವೇರಿಸುವರು. ಅಧ್ಯಕ್ಷತೆಯನ್ನು ಮೈಸೂರು ವಿಭಾಗದ ಬಿಜೆಪಿ ಪ್ರಭಾರಿ ಸ್ವಾಮಿ ಮರುಳಾಪುರ ವಹಿಸುವರು. ಭಜರಂಗಸೇನೆ ಬಿ.ಮಂಜುನಾಥ್ ಪಾಲ್ಗೊಳ್ಳುವರು. ಪಿಟೀಲು-ಹಾರ್ಮೋನಿಯಂ ವಾದಕ ರೇಣುಕಾಚಾರ್ ಗುರುಮೂರ್ತಿ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ನೇತ್ರ ತಜ್ಞೆ ಡಾ.ಪೂರ್ಣಿಮಾ, ಶ್ರೀ ಗೀತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಬಸವರಾಜು , ರೋಟರಿ ಪಬ್ಲಿಕ್ ಇಮೇಜ್ ಛೇರ್ಮನ್ ಸಿ.ಪ್ರಶಾಂತ್ ಉಪಸ್ಥಿತರಿರುವರು.ಚಿದಂಬರನಟೇಶ ನಾಟ್ಯಶಾಲೆಯ ವಿದುಷಿ ಸುನೀತಾ, ಎಸ್.ನಂದಕುಮಾರ್ ನೇತೃತ್ವದಲ್ಲಿ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಭರತನಾಟ್ಯ, ನೃತ್ಯರೂಪಕ,ಗಣ್ಯರಿಗೆ ಅಭಿನಂದನೆ, ಹಿರಿಯ ನೃತ್ಯ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.