ಜಾನಪದ ಕಲೆ ಉಳಿಸುವುದು ಅಗತ್ಯ

| Published : Dec 04 2024, 12:31 AM IST

ಸಾರಾಂಶ

ಚಿತ್ರದುರ್ಗ: ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಜಾನಪದ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ನಗರಸಭೆ ಸದಸ್ಯ ಎಚ್.ಶ್ರೀನಿವಾಸ್ ಹೇಳಿದರು.

ಚಿತ್ರದುರ್ಗ: ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಜಾನಪದ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ನಗರಸಭೆ ಸದಸ್ಯ ಎಚ್.ಶ್ರೀನಿವಾಸ್ ಹೇಳಿದರು. ಬುದ್ಧ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಘ , ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದೊಂದಿಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ವಾಸುದೇವರೆಡ್ಡಿ ಪ್ರೌಢ ಶಾಲೆಯಲ್ಲಿ ನಡೆದ ಜಾನಪದ ಸಿರಿ ಸಂಭ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಜಾನಪದ, ಸೋಬಾನೆ, ಗೀಗಿಪದ, ತತ್ವಪದಗಳನ್ನು ಹಾಡುವವರೆ ಕಡಿಮೆಯಾಗಿದ್ದಾರೆ. ಹಿಂದಿನ ಕಾಲದಲ್ಲಿ ಸುಗ್ಗಿ ಸಂದರ್ಭದಲ್ಲಿ ಜಾನಪದ ಹಾಡುಗಳು ಮೊಳಗುತ್ತಿದ್ದವು. ಗಾದೆ ಮಾತು, ಒಗಟು, ಬಾಯಿಂದ ಬಾಯಿಗೆ ಹರಡುವ ಜಾನಪದನ್ನು ಪೋಷಿಸಿದರೆ ಮಾತ್ರ ಕಲಾವಿದರು ಉಳಿಯಲು ಸಾಧ್ಯ ಎಂದರು. ಬುದ್ಧ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಡಿ.ನಾಗರಾಜ್ ಮಾತನಾಡಿ, ಇಂದು ಜಾನಪದ ಗೀತೆ, ಸೋಬಾನೆ, ತತ್ವಪದಗಳನ್ನು ಹಾಡುವವರು ಇಲ್ಲದಂತಾಗಿದ್ದಾರೆ. ಅದಕ್ಕಾಗಿ ಜಾನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಡಾ.ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜಾನಪದ ಕಲೆಯನ್ನು ಪರಿಚಯಿಸಬೇಕಿದೆ. ಜಾನಪದ ಎನ್ನುವುದು ಕೇವಲ ಹಾಡಲ್ಲ. ಅದೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಾಧನ ಎಂದರು.ಮುಖ್ಯ ಶಿಕ್ಷಕಿ ಪದ್ಮ ಅಧ್ಯಕ್ಷತೆ ವಹಿಸಿದ್ದರು.

ಬಡಾವಣೆ ಠಾಣೆ ಸಬ್‍ಇನ್ಸ್‌ಪೆಕ್ಟರ್‌ ಯಶೋಧ, ನ್ಯಾಯವಾದಿ ಎಸ್.ವಿಜಯಕುಮಾರ್, ಬುದ್ಧ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ರೇಖಮ್ಮ, ಕೃಷ್ಣಪ್ಪ ಎ.ಹುಲ್ಲೂರು, ಶಿಕ್ಷಕರುಗಳಾದ ರಾಮಲಿಂಗಪ್ಪ, ನಾಗರಾಜ್, ರವಿಕುಮಾರ್, ಮಹಮದ್ ಫಜಲುಲ್ಲಾ, ಗಿರಿಜಮ್ಮ, ಶಿವಮೂರ್ತಿ ವೇದಿಕೆಯಲ್ಲಿದ್ದರು.