ಸಾರಾಂಶ
ಹಾನಗಲ್ಲ: ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ತಮ್ಮಲ್ಲಿರುವ ಕೌಶಲ್ಯಗಳ ಬಗ್ಗೆ ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಗ್ರಾಮಿಣ ಪ್ರದೇಶದ ಮಹಿಳೆಯರ ಜನಪದ ಕಲೆ ಕೂಡ ಕೌಶಲ್ಯಗಳಲ್ಲಿ ಒಂದಾಗಿದೆ ಎಂದು ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದ ಸಮಾಜ ಸೇವಾ ಕಾರ್ಯಕರ್ತೆ ವೈ.ಎಸ್. ಹೊನ್ನಮ್ಮ ಹೇಳಿದರು.
ಹಾನಗಲ್ಲ ತಾಲೂಕಿನ ಹಸನಾಬಾದಿಯಲ್ಲಿ ಲೋಯಲಾ ವಿಕಾಸ ಕೇಂದ್ರ ಮಹಿಳಾ ಸ್ವಸಹಾಯ ಸಂಘ ಮಹಿಳೆಯರಿಗಾಗಿ ಆಯೋಜಿಸಿದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಧೈರ್ಯ, ಮುಂದಾಳತ್ವ, ಜವಾಬ್ದಾರಿ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಸದಿಂದ ರಸ ಮಾಡುವ ಆಲೋಚನೆ ಬೆಳೆಸಿಕೊಂಡರೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.ಸಂಪನ್ಮೂಲ ವ್ಯಕ್ತಿ ಮುಂಡಗೋಡದ ರುಡ್‌ಸೆಟ್‌ನ ಶಾಂತಕುಮಾರ ಕೀರ್ತೆಪ್ಪನವರ ಮಾತನಾಡಿ, ಇಂದು ಮಹಿಳೆಯರು ಪ್ರತಿ ರಂಗದಲ್ಲಿಯೂ ಮುಂದಿದ್ದಾರೆ. ಸ್ವ ಸಹಾಯ ಗುಂಪುಗಳನ್ನು ರಚಿಸಿಕೊಂಡು ಆರ್ಥಿಕ ಅಭಿವೃದ್ಧಿ ಕಾಣುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಸಾಲದ ವಿಷಯವಾಗಿ ಚರ್ಚಿಸುವ ನಾವು, ಅದನ್ನು ಹೇಗೆ ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯವೆಂದು ತಿಳಿಯಬೇಕಿದೆ. ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಫ್ಯಾನ್ಸಿ ಗೊಂಬೆ ತಯಾರಿಕೆ, ಫಾಸ್ಟ್ ಪುಡ್ ಸ್ಟಾಲ್ ಉದ್ಯಮ, ಬಿದಿರಿನ ಅಲಂಕಾರಿಕ ಉತ್ಪನ್ನಗಳ ತಯಾರಿಕೆ, ಮೇಣಬತ್ತಿ ತಯಾರಿಕೆ, ಹೈನುಗಾರಿಕೆ, ಅಣಬೆ ತಯಾರಿಕೆ, ಕೋಳಿ ಮತ್ತು ಕುರಿ ಸಾಕಾಣಿಕೆ ಇಂತಹ ತರಬೇತಿಗಳನ್ನು ಕೆನರಾ ಬ್ಯಾಂಕ್ ಹಳಿಯಾಳ ಹಾಗೂ ದೇಶಪಾಂಡೆ ರುಡ್‌ಸೆಟ್ ಸಂಸ್ಥೆಯಲ್ಲಿ ೧ ತಿಂಗಳಿನಿಂದ ೩ ತಿಂಗಳ ವರೆಗೆ ಉಚಿತವಾಗಿ ತರಬೇತಿಗಳೊಂದಿಗೆ ಉದ್ಯೋಗ ಪ್ರಮಾಣಪತ್ರ ನೀಡಲಾಗುವುದು. ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡಿ ಕುಟುಂಬಗಳ ಆರ್ಥಿಕ ಅಭಿವೃದ್ಧಿ ಮಾಡಿಕೊಳ್ಳಬೇಕು ಎಂದರು.
ಸಾಮಾಜಿಕ ಕಾರ್ಯಕರ್ತೆ ಜನವೇದಿಕೆ ನಾಯಕಿ ನಜ್ಮಾ ಬಿ. ಮುಲ್ಲಾ ಉದ್ಘಾಟಿಸಿದರು. ಹುಲ್ಲತ್ತಿ ಪಂಚಾಯಿತಿಯ ಹಸನಾಬಾದಿ, ಕೊಪ್ಪರಸಿಕೊಪ್ಪ, ಚಿನ್ನಳ್ಳಿ, ದಶರಥಕೊಪ್ಪ, ಹುಲ್ಲತ್ತಿ ಸೇರಿದಂತೆ ೧೬೫ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.ಪಿರಪ್ಪ ಶಿರ್ಶಿ ಸಂವಿಧಾನದ ಪ್ರಸ್ತಾವನೆ ಮಂಡಿಸಿದರು. ಪೂಜಾ ಚಿಕ್ಕೇರಿ ಸ್ವಾಗತಿಸಿದರು. ಹೊನ್ನಮ್ಮ ವೈ.ಎಸ್. ವಂದಿಸಿದರು. ಪ್ರಗತಿ ಮಹಿಳಾ ತಾಲೂಕು ಒಕ್ಕೂಟದ ಸದಸ್ಯೆ ರಾಧಾ ಹೊಸಮನಿ, ಸುಸ್ಥಿರ ಅಭಿವೃದ್ಧಿಯ ಫಲಾನುಭವಿ ಗುಣಸಾಗರವ್ವ ವಾಲಿಕಾರ ಪಾಲ್ಗೊಂಡಿದ್ದರು.