ಸಾರಾಂಶ
ಚಿತ್ರದುರ್ಗ: ಜಾನಪದ ಕಲೆಗಳು ದೂರವಾಗುತ್ತಿರುವುದರಿಂದ ಮನುಷ್ಯ ಸಂಬಂಧಗಳ ನಡುವೆ ಬಿರುಕುಂಟಾಗಿ ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಜಾನಪದ ಕಲೆಗಳಿಗೆ ಪ್ರಾಶಸ್ತ್ಯ ನೀಡುವುದು ಅಗತ್ಯ ಎಂದು ರಂಗ ವಿಮರ್ಶಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ್ ವಿಷಾದಿಸಿದರು.
ಚಿತ್ರದುರ್ಗ: ಜಾನಪದ ಕಲೆಗಳು ದೂರವಾಗುತ್ತಿರುವುದರಿಂದ ಮನುಷ್ಯ ಸಂಬಂಧಗಳ ನಡುವೆ ಬಿರುಕುಂಟಾಗಿ ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಜಾನಪದ ಕಲೆಗಳಿಗೆ ಪ್ರಾಶಸ್ತ್ಯ ನೀಡುವುದು ಅಗತ್ಯ ಎಂದು ರಂಗ ವಿಮರ್ಶಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ್ ವಿಷಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಕಾಲ್ಕೆರೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲೂಕಿನ ಮದಕರಿಪುರದ ಬಯಲು ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಜಾನಪದ ಸಂಭ್ರಮ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಒಂದು ಕಾಲದಲ್ಲಿ ಜಾನಪದ ಪರಂಪರೆಯನ್ನು ಹೊಂದಿದ್ದ ಮದಕರಿಪುರದಲ್ಲಿ ಈಗ ಜಾನಪದ ಕಲೆಗಳು ಕಾಣೆಯಾಗುತ್ತಿವೆ. ಮೊಬೈಲ್ ಹಾವಳಿಯಿಂದ ಸೋನಾನೆ ಪದ, ನಾಟಕ, ರಂಗಗೀತೆ, ಭಾವಗೀತೆ, ದಾಸರಪದ ಇವುಗಳನ್ನು ಹಾಡುವವರೆ ಇಲ್ಲದಂತಾಗಿದ್ದಾರೆ. ಸಾಮರಸ್ಯವನ್ನು ಮೂಡಿಸುವ ಜಾನಪದ ಉಳಿಯಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಚಯಿಸಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ನುಂಕಪ್ಪ ಮಾತನಾಡಿ, ಜಾಗತಿಕರಣದ ಕೊಳ್ಳುಬಾಕು ಸಂದರ್ಭದಲ್ಲಿ ಜಾನಪದ ಸಂಭ್ರಮ ನಡೆಯುತ್ತಿರುವುದು ಅತ್ಯಂತ ಖುಷಿಯ ವಿಚಾರ. ಡಿಜಿಟಲ್ ಯುಗದಲ್ಲಿ ಸಾಂಸ್ಕೃತಿಕ ಕನ್ನಡಿ ಹೊಡೆದು ಚೂರಾಗಿದೆ. ಜನರ ಜೀವಾಳ ಜನಪದ ಮೌಖಿಕ ಪರಂಪರೆ. ಕೋಲಾಟ, ಗೀಗಿಪದ, ಸೋಬಾನೆ ಪದ, ಯಕ್ಷಗಾನ, ಕಂಸಾಳೆ ಇನ್ನು ಅನೇಕ ಕಲೆಗಳಿಂದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬಹುದು ಎಂದರು.ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್, ನ್ಯಾಯವಾದಿಗಳಾದ ಡಾ.ಎಂ.ಸಿ.ನರಹರಿ, ಕಿರಣ್‍ಕುಮಾರ್ ಜೈನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ಪ ಹುಲ್ಲೂರು, ಕೊಳಲು ವಾದಕ ಗುರುರಾಜ್ ವೇದಿಕೆಯಲ್ಲಿದ್ದರು.
ತ್ರಿವೇಣಿ, ಬಡಾವಣೆ ಠಾಣೆ ಸಬ್ ಇನ್ಸ್‌ಪೆಕ್ಟರ್ ಯಶೋಧ, ಹರೀಶ್ ಇವರುಗಳು ಜಾನಪದ ಹಾಡುಗಳನ್ನು ಹಾಡಿ ಮದಕರಿಪುರ ಗ್ರಾಮಸ್ಥರನ್ನು ರಂಜಿಸಿದರು. ಸೋಬಾನೆ ಪದ, ಗೀಗಿ ಪದ, ಜಾನಪದ ಕಲಾವಿದರು, ಬೀದಿ ನಾಟಕಕಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.