ಜಾನಪದ ಕಲೆ ಉಳಿಸಿ ಬೆಳೆಸಬೇಕು: ಶ್ರೀನಿವಾಸ್‌

| Published : Feb 12 2024, 01:36 AM IST

ಸಾರಾಂಶ

ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಸಲಹೆ ಮಾಡಿದರು.

- ಗಡಿಹಳ್ಳಿಯಲ್ಲಿ ಅಜ್ಜಂಪುರ ತಾಲೂಕು ತೃತೀಯ ಜಾನಪದ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಸಲಹೆ ಮಾಡಿದರು.ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ನಡೆದ ತಾಲೂಕು ತೃತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಶ್ರಮದ ಬದುಕಿನ ನಡುವೆ ಕಟ್ಟಿ ಬೆಳೆಸಿದ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ತಲತಲಾಂತರಗಳಿಂದ ಬಾಯಿಂದ ಬಾಯಿಗೆ ಹರಿದು ಬರುವ ಮೂಲಕ ಉಳಿದು ಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವ ಜನತೆ ಆಧುನಿಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿ ಗೀಳಿನಿಂದಾಗಿ ಜನಮಾನಸದಿಂದ ದೂರವಾಗುತ್ತಿದೆ ಎಂದು ವಿಷಾದಿಸಿದರು. ನಮ್ಮ ಯುವ ಜನತೆ ಆಧುನಿಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹದಿಂದ ಹೊರಬಂದು ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡಲ್ಲಿ ಮಾತ್ರ ಅವು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು. ಗಡಿಹಳ್ಳಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಲಾಗುವುದು, ತರೀಕೆರೆಯಲ್ಲಿ ನಡೆದ ಮೊದಲ ಜಾನಪದ ಸಮ್ಮೇಳನದಲ್ಲಿ ಬಿಡುಗಡೆ ಗೊಂಡಿದ್ದ ಹೊನ್ನ ಬಿತ್ತೇವು ಹೊಲಕೆಲ್ಲ ಕೃತಿಯ ಮರು ಮುದ್ರಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಕುವೆಂಪು ವಿವಿ ಸಹ ಪ್ರಾಧ್ಯಾಪಕ ನಲ್ಲೀಕಟ್ಟೆ ಎಸ್. ಸಿದ್ದೇಶ್ ಮಾತನಾಡಿ, ಇಂದಿನ ಯುವ ಸಮೂಹ ನಮ್ಮ ಮೂಲ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯತ್ತ ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು. ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್, ಜಾನಪದ ಸಮ್ಮೇಳನಗಳ ಮೂಲಕ ನಮ್ಮ ಭಾರತೀಯ ಉಡುಗೆ, ತೊಡುಗೆ ನಡೆ ನುಡಿ, ಸಂಸ್ಕೃತಿಯನ್ನು ಪರಿಷತ್ತು ಪರಿಚಯಿಸುತ್ತಿದೆ ಎಂದರು. ಸಭ್ಯ ಮತ್ತು ಸ್ವಾಸ್ತ್ಯ ಸಮಾಜದ ನಿರ್ಮಾಣ ಕರ್ನಾಟಕ ಜಾನಪದ ಪರಿಷತ್ತಿನ ಆಶಯ. ಅದಕ್ಕಾಗಿ ಎಲ್ಲೆಡೆ ಜಾನಪದ ಸಮ್ಮೇಳನಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು. ಸಮ್ಮೇಳನಾಧ್ಯಕ್ಷ ಟಿ. ನಿಂಗಪ್ಪ ಮಾತನಾಡಿ, ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಸರ್ಕಾರ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಜಾನಪದವನ್ನು ಅಳವಡಿಸಬೇಕು ಎಂದು ಸಲಹೆ ಮಾಡಿದರು. ಕಲಾ ಪ್ರದರ್ಶನಕ್ಕಾಗಿ ಜಾನಪದ ಕಲಾವಿದರಿಗೆ ನೀಡಲಾಗುವ ಪ್ರೋತ್ಸಾಹ ಧನ ಹೆಚ್ಚಿಸಬೇಕು ಜಾನಪದ ಕಲಾವಿದರ ಮಾಸಾಶನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ಗೌರವಾಧ್ಯಕ್ಷ ಮರುಳ ಸಿದ್ದಪ್ಪ, ಉಪಾಧ್ಯಕ್ಷ ತಿಪ್ಪೇಶ್, ಅಣ್ಣಾಪುರ ಅಣ್ಣಯ್ಯ, ಗಡಿಹಳ್ಳಿ ಮಂಜುನಾಥ್, ಪರಮೇಶ್, ಎಸ್.ಎಸ್. ವೆಂಕಟೇಶ್ ಮಾತನಾಡಿದರು. ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷ ಟಿ. ನಿಂಗಪ್ಪರನ್ನು ಸಾರೋಟಿನಲ್ಲಿ ವಿವಿಧ ಜಾನಪದ ಕಲಾತಂಡಗಳ ನಡುವೆ ಮೆರವಣಿಗೆ ಮುಖಾಂತರ ವೇದಿಕೆಗೆ ಕರೆಯಲಾಯಿತು. ಗ್ರಾಪಂ ಅಧ್ಯಕ್ಷ ಜಿ.ಎಸ್. ತಿಮ್ಮಯ್ಯ ರಾಷ್ಟ್ರಧ್ವಜಾರೋಹಣ, ಕಜಾಪ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ನಾಡ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ಜಿ. ನಟರಾಜ್, ಬುಕ್ಕಾಂಬುದಿ ಗುರುಮೂರ್ತಿ, ರಘುಮೂರ್ತಿ, ಹಿರಿಯ ಕಲಾವಿದೆ ಮುಗುಳಿ ಲಕ್ಷ್ಮೀ ದೇವಮ್ಮ, ವಾಣಿ ಶ್ರೀನಿವಾಸ್ ಚಿಕ್ಕನಲ್ಲೂರು ಜಯಣ್ಣ, ಕುಂಕನಾಡು ನಾಗರಾಜ್, ಜಗದೀಶಾಚಾರ್, ತ್ಯಾಗದಕಟ್ಟೆ ಪ್ರಕಾಶ್, ಜಿ.ಎಸ್. ಬಸವರಾಜಪ್ಪ, ಯತೀಶ್, ಪರಮೇಶ್ವರಪ್ಪ ಉಪಸ್ಥಿತರಿದ್ದರು. 11 ಕೆಸಿಕೆಎಂ 1ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ನಡೆದ ತಾಲೂಕು ತೃತೀಯ ಜಾನಪದ ಸಮ್ಮೇಳನವನ್ನು ಶಾಸಕ ಜಿ.ಎಚ್‌. ಶ್ರೀನಿವಾಸ್‌ ಉದ್ಘಾಟಿಸಿದರು.