ಕುಷ್ಟಗಿ: ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿ, ಪರಂಪರೆ ಅರಿತುಕೊಳ್ಳಬೇಕು, ಜಾನಪದ ಕಲೆ ನಮ್ಮ ಪೂರ್ವಜರ ಬದುಕಿನ ಪ್ರತಿಬಿಂಬವಾಗಿವೆ. ಯುವಪೀಳಿಗೆ ಜಾನಪದ ಸಂಸ್ಕೃತಿ ಅರಿತು ಸಂರಕ್ಷಿಸುವ ಹೊಣೆ ಹೊತ್ತುಕೊಳ್ಳಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್ ಹೇಳಿದರು.
ಪಟ್ಟಣದ ಬಿ.ಜಿ.ಎಸ್.ಪ್ಯಾರಾ ಮೆಡಿಕಲ್ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ(ರಿ) ವತಿಯಿಂದ ಹಮ್ಮಿಕೊಂಡಿದ್ದ ನೆಲ ಮೂಲ ಸಂಸ್ಕೃತಿ-ನಮ್ಮ ಜಾನಪದ ಕಲಾ ಪ್ರಕಾರಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನಸಾಮಾನ್ಯರ ಬದುಕಿನಲ್ಲಿ ಬರುವ ನೋವು-ನಲಿವುಗಳು ಜಾನಪದಗಳಾಗಿ ಹೊರಹೊಮ್ಮಿ ತಲೆಮಾರುಗಳಿಂದ ತಲೆಮಾರಿಗೆ ಮುಂದುವರೆಯುತ್ತಿವೆ. ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ತಮ್ಮ ಸುಂದರ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವ ಸಮುದಾಯ ಒಣ ಭ್ರಮೆ, ಭ್ರಾಂತಿಗಳಿಗೆ ಒಳಗಾಗದೇ ಮುಂದಿನ ಜೀವನ ಸುಖಮಯವಾಗಿಸಿಕೊಳ್ಳಲು ಒಳ್ಳೆಯ ಗುರಿ ಇಟ್ಟುಕೊಳ್ಳಬೇಕು.ನಮ್ಮ ಪರಂಪರೆ ಅರಿತು, ಅದರ ಮೌಲ್ಯ ಅಳವಡಿಸಿಕೊಳ್ಳಬೇಕು. ಹಾಗೆಯೇ ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳ ಕುರಿತು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.
ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ಬಿನ್ನಾಳ ಜಾನಪದದಲ್ಲಿ ಲಾವಣಿ ಮತ್ತು ಗೀಗೀ ಪದಗಳ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ಹಳ್ಳಿಗಳ ಸಂಸ್ಕೃತಿ ಗಟ್ಟಿಗೊಳ್ಳಬೇಕಾದರೆ ಮೂಲ ಜಾನಪದ ಗೀತೆಗಳಾದ ಕುಟ್ಟುವ ಪದ, ಬೀಸುವ ಪದ, ಕೋಲಾಟದ ಪದ, ಲಾವಣಿ, ಸೋಬಾನೆ ಹಾಡು ಮೂಲ ದಾಟಿ ಮತ್ತು ಶೈಲಿ ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಭಾಷೆ ಗಟ್ಟಿಗೊಳ್ಳಲಿದೆ ಎಂದರು.ಬಿ.ಜಿ.ಎಸ್. ಪ್ಯಾರಾ ಮೆಡಿಕಲ್ ಕಾಲೇಜು ಅಧ್ಯಕ್ಷ ಶ್ರೀಶೈಲ ವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಕಲಾರಂಗ ಸಂಸ್ಥೆ (ರಿ) ಕುಷ್ಟಗಿ ಅಧ್ಯಕ್ಷ ಶರಣಪ್ಪ ವಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡ್ರರಿಗೆ ಪ್ರೇರಕ ಚೇತನ ಮತ್ತು ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ಬಿನ್ನಾಳ ಇವರಿಗೆ ಜನಪದ ಚೇತನ ಬಿರುದುಗಳನ್ನು ಸಂಸ್ಥೆಯಿಂದ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕಲಾವಿದರಾದ ದಾವಲಸಾಬ್ ಅತ್ತಾರ, ಮುದಕವ್ವ ಗಂಜ್ಯಾಳ, ನಿಂಗಪ್ಪ ಸೊಲ್ಲಾಪೂರ, ಮಲ್ಲಿಕಾರ್ಜುನ ಕುಲಕರ್ಣಿ ಮತ್ತು ಸಂಗಡಿಗರಿಂದ ಲಾವಣಿ, ಗೀಗೀ ಪದ ಕಾರ್ಯಕ್ರಮ ನಡೆದವು. ನಾಗರಾಳ ಗ್ರಾಮದ ಬಾಳಮ್ಮ ಯಲಬರ್ತಿ ಹಾಗೂ ಸಂಗಡಿಗರಿಂದ ಸಂಪ್ರದಾಯದ ಪದ,ಶರಣಪ್ಪ ಬನ್ನಿಗೋಳ ಹಾಗೂ ಬಸವರಾಜ ಗಂಗನಾಳ ಹಾಗೂ ಸಂಗಡಿಗರಿಂದ ಬಯಲಾಟದ ಪದ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು.
ಅಕ್ಕಮಹಾದೇವಿ ಪ್ರಾರ್ಥಿಸಿದರು. ಉಪನ್ಯಾಸಕ ಕಿರಣ ಬಡಿಗೇರ ಸ್ವಾಗತಿಸಿದರು. ಚನ್ನಪ್ಪ ಭಾವಿಮನಿ ನಿರೂಪಿಸಿದರು. ಅನಿಲಕುಮಾರ ವಂದಿಸಿದರು.