ಜನಪದ ಕಲೆಗಳು ಸಾಂಪ್ರದಾಯಿಕ ಸಂಸ್ಕೃತಿ ಪಸರಿಸುವ ಬಹುಮುಖ್ಯ ಮಾಧ್ಯಮ-ಪ್ರೊ. ಬಿ.ಕೆ. ರವಿ

| Published : Jul 06 2024, 12:51 AM IST

ಜನಪದ ಕಲೆಗಳು ಸಾಂಪ್ರದಾಯಿಕ ಸಂಸ್ಕೃತಿ ಪಸರಿಸುವ ಬಹುಮುಖ್ಯ ಮಾಧ್ಯಮ-ಪ್ರೊ. ಬಿ.ಕೆ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದ ಕಲೆಗಳು ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರಚಾರ ಮಾಡುವ ಬಹುಮುಖ್ಯ ಮಾಧ್ಯಮವಾಗಿವೆ. ಜನಪದ ಕಲಾ ಪ್ರಕಾರಗಳನ್ನು ಬಳಸಿ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.

ಶಿಗ್ಗಾಂವಿ: ಜನಪದ ಕಲೆಗಳು ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರಚಾರ ಮಾಡುವ ಬಹುಮುಖ್ಯ ಮಾಧ್ಯಮವಾಗಿವೆ. ಜನಪದ ಕಲಾ ಪ್ರಕಾರಗಳನ್ನು ಬಳಸಿ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹಾವೇರಿ ಮತ್ತು ಶಿಗ್ಗಾಂವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ, ಪರದೆ ಸಿನೆಮಾ ವೇದಿಕೆ ಉದ್ಘಾಟನೆ ಹಾಗೂ ಸಮಾಜದ ಮೇಲೆ ನವ ಮಾಧ್ಯಮಗಳ ಪ್ರಭಾವ ಮತ್ತು ಪರಿಣಾಮ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮರೆಯಾಗುತ್ತಿರುವ ಜನಪದ ಕಲಾ ಪ್ರಕಾರಗಳನ್ನು ಬಳಸುವ ನೆಪದಲ್ಲಿ ಅವುಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎನ್ನುವ ಚಿಂತನೆ ಮಾಡಬೇಕಾಗಿದೆ. ಜನಪದ ಕಲಾ ಮಾಧ್ಯಮ ನನ್ನ ಪ್ರೀತಿಯ ವಿಷಯವಾಗಿರುವುದರಿಂದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿರುವುದು ಸಂತೋಷವಾಗಿದೆ. ಮುದ್ರಣ ಮಾಧ್ಯಮಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ಕನೇ ಅಂಗವಾದ ಪತ್ರಿಕಾ ರಂಗ ಪ್ರಜಾಪ್ರಭುತ್ವವನ್ನು ಸರಿ ಹಾದಿಗೆ ಒಯ್ಯುವಲ್ಲಿ ಸಹಕಾರಿಯಾಗಿದೆ. ಮಾಧ್ಯಮ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವ ಮೂಲಕ ಸಮಾಜವನ್ನು ಸರಿ ದಾರಿಗೆ ತಂದು ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿವೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಅವರು ಪರದೆ ಸಿನೆಮಾ ವೇದಿಕೆ ಉದ್ಘಾಟಿಸಿ ಮಾತನಾಡಿ, ಐವತ್ತು ಅರವತ್ತರ ದಶಕದ ಸಂದರ್ಭದಲ್ಲಿ ಕನ್ನಡದ ಸಿನೆಮಾಗಳು ಕನ್ನಡಿಗರನ್ನು ಒಂದುಗೂಡಿಸುವ ಕಲ್ಪನೆಯನ್ನು ಹೊಂದಿರುತ್ತಿದ್ದವು. ಕನ್ನಡದ ಪ್ರಜ್ಞೆಯನ್ನು ಬೆಳೆಸುವ ಕೀರ್ತಿ ಕನ್ನಡದ ಸಿನೆಮಾಗಳಿಗೆ ಸಲ್ಲುತ್ತದೆ. ಸಕಾರಾತ್ಮಕ ಪ್ರಭಾವ ಬೀರುವ ಅಂಶಗಳು ಆ ಸಿನೆಮಾಗಳಲ್ಲಿ ಇರುತ್ತಿದ್ದವು ಎಂದರು.

ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಅವರು ನವ ಮಾಧ್ಯಮಗಳ ಪ್ರಭಾವ ಮತ್ತು ಪರಿಣಾಮ ಎಂಬ ವಿಷಯದ ಕುರಿತು ಮಾತನಾಡಿ, ನವ ಮಾಧ್ಯಮಗಳು ಇಂದು ವಿಸ್ತಾರವಾಗಿ ಬೆಳೆದಿವೆ. ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ನವ ಮಾಧ್ಯಮಗಳು ಅನುಕೂಲಕರವಾಗಿವೆ. ನವ ಮಾಧ್ಯಮದಲ್ಲಿ ಒಂದು ವಿಷಯ ಸುದೀರ್ಘವಾಗಿ ಚರ್ಚೆಯಾಗುತ್ತದೆ ಎಂದರು.

ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ವಿಶ್ವವಿದ್ಯಾಲಯ ನಿರಂತರವಾಗಿ ಪ್ರಯತ್ನ ಮಾಡುತ್ತ ಬಂದಿದೆ. ವಿದ್ಯಾರ್ಥಿಗಳ ಜೀವನ ರೂಪಿಸುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಆ ಮೂಲಕ ವಿಶ್ವವಿದ್ಯಾಲಯವನ್ನು ಎಲ್ಲರ ಮನೆ ಮನಗಳಲ್ಲಿ ಕೊಂಡೊಯ್ಯಲಾಗುತ್ತಿದೆ. ಹಳ್ಳಿ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಡಲಾಗುತ್ತಿದೆ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್, ಎಂ. ಸಾಲಿ ಅವರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ವಿಭಾಗ ಅತ್ಯಂತ ಸಕ್ರೀಯವಾಗಿದೆ. ಅತ್ಯಂತ ಬದ್ಧತೆಯಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕ ಡಾ. ಸಂಜಯಕುಮಾರ ಮಾಲಗತ್ತಿ ಅವರು ಮಾತನಾಡಿ, ಭಾರತದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಪ್ರತಿಭಟಿಸುವ ಉದ್ದೇಶದಿಂದ ಮುದ್ರಣ ಮಾಧ್ಯಮ ಹುಟ್ಟಿಕೊಂಡಿತು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಕನ್ನಡ ಪತ್ರಿಕೆಗಳು ಮಾಡಿದವು. ಮುದ್ರಣ ಮಾಧ್ಯಮ ನಿಖರತೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದರು.

ಹಿರಿಯ ಪತ್ರಕರ್ತ ವಿಜಯ ಹೂಗಾರ ಅವರು ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಸತ್ಯದ ಪರಾಮರ್ಶೆಯನ್ನು ಮಾಡುವುದಿಲ್ಲ, ಅವುಗಳಿಂದ ಸುಳ್ಳು ಸುದ್ದಿ ತಡೆಯುವ ಪ್ರಯತ್ನಗಳಾಗಬೇಕು ಎಂದರು.

ಕಾರ್ಯಕ್ರಮದ ಸಂಚಾಲಕರು, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹಿರೇಮಠ, ತಾಲೂಕು ಅಧ್ಯಕ್ಷ ಪರಮೇಶ ಲಮಾಣಿ, ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಉಪಸ್ಥಿತರಿದ್ದರು.

ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಸ್ವಾಗತಿಸಿದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ನಿರೂಪಿಸಿದರು.