ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಅಡಕವಾಗಿದ್ದು, ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ. ರಾಜ್ಯದಲ್ಲಿ ಕಂಸಾಳೆ, ಯಕ್ಷಗಾನ, ಬಯಲಾಟ, ಸೋಬಾನೆ, ತಂಬೂರಿ ಪದ, ಪೂಜಾ ಕುಣಿತ, ತಮಟೆ, ನಗಾರಿ, ಪಟದ ಕುಣಿತ, ಸೇರಿದಂತೆ ಹಲವಾರು ಜಾನಪದ ಕಲಾ ಪ್ರಕಾರಗಳು ಅತ್ಯಂತ ಶ್ರೀಮಂತವಾಗಿವೆ.

ಕನ್ನಡಪ್ರಭ ವಾರ್ತೆ ಹಲಗೂರು

ಆಧುನಿಕ ಜೀವನ ಶೈಲಿಯ ಪ್ರಭಾವದಿಂದ ಜಾನಪದ ಕಲಾ ಪ್ರಕಾರಗಳು ಹಿಂದಿನ ಗತವೈಭವ ಕಳೆದುಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಉಸಿರಾಡುತ್ತಿರುವ ಜಾನಪದ ಕಲೆಗಳನ್ನು ಉಳಿಸಲು, ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಾನಪದ ಸಂಸ್ಕತಿ ಚಿಂತಕ ಎ.ಬಿ.ಚೇತನ ಕುಮಾರ್ ತಿಳಿಸಿದರು.

ಸಮೀಪದ ಬ್ಯಾಡರಹಳ್ಳಿ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಂಬೇಡ್ಕರ್ ಸಭಾಂಗಣದಲ್ಲಿ ಕಲಾಲೋಕ ಫೌಂಡೇಶನ್ ಮದ್ದೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕರುನಾಡ ಜಾನಪದ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಅಡಕವಾಗಿದ್ದು, ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ. ರಾಜ್ಯದಲ್ಲಿ ಕಂಸಾಳೆ, ಯಕ್ಷಗಾನ, ಬಯಲಾಟ, ಸೋಬಾನೆ, ತಂಬೂರಿ ಪದ, ಪೂಜಾ ಕುಣಿತ, ತಮಟೆ, ನಗಾರಿ, ಪಟದ ಕುಣಿತ, ಸೇರಿದಂತೆ ಹಲವಾರು ಜಾನಪದ ಕಲಾ ಪ್ರಕಾರಗಳು ಅತ್ಯಂತ ಶ್ರೀಮಂತವಾಗಿವೆ ಎಂದರು.

ಪತ್ರಕರ್ತ ಎಸ್.ಉಮೇಶ್ ಮಾತನಾಡಿ, ಜನಸಾಮಾನ್ಯರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಸಿಲುಕಿದ್ದಾರೆ. ಇದರಿಂದ ಮನಸ್ಸಿಗೆ ಮುದ ನೀಡುವ ಹಲವು ದೇಶಿ ಸಂಸ್ಕೃತಿಯ ಆಚರಣೆಗಳು ಕಣ್ಮರೆಯಾಗುತ್ತಿವೆ ಎಂದರು.

ಶ್ರಮ ಸಂಸ್ಕ್ರತಿಯ ಮೂಲಕ ಹುಟ್ಟಿಕೊಂಡ ವಿವಿಧ ಬಗೆಯ ಜಾನಪದ ಕಲಾ ಪ್ರಕಾರಗಳು ಅಳಿವಿನಂಚಿಗೆ ತಲುಪಿರುವುದು ನೋವಿನ ಸಂಗತಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ ಎಂದರು.

ಉಪನ್ಯಾಸಕ ಜಾಕೀರ್ ಹುಸೇನ್ ಮಾತನಾಡಿ, ಮದ್ದೂರಿನ ಕಲಾಲೋಕ ಫೌಂಡೇಶನ್ ನಿರಂತರವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಲೆ, ಸಾಹಿತ್ಯ, ವಿಚಾರ ಸಂಕಿರಣ ಇತಿಹಾಸ, ಸಂಸ್ಕೃತಿ ಬಿಂಬಿಸುವ ಜೊತೆಗೆ, ಮುಂದಿನ ತಲೆಮಾರಿಗೆ ಸಂಸ್ಕೃತಿಯನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಂತಾರಾಷ್ಟ್ರೀಯ ಜಾನಪದ ಗಾಯಕ ಬ್ಯಾಡರಹಳ್ಳಿ ಶಿವಕುಮಾರ್ ಜಾನಪದ ಗೀತೆ ಹಾಡಿ ರಂಜಿಸಿದರು. ವಿದ್ಯಾರ್ಥಿಗಳಿಂದ ಜಾನಪದ ಗೀತೆಗಳಿಗೆ ನೃತ್ಯ ನೋಡುಗರ ಮನಸೂರೆಗೊಂಡಿತು.

ಈ ವೇಳೆ ಶಿಕ್ಷಕರಾದ ಬಸವರಾಜು, ಮಿಸ್ಮಿತಾ, ಕಲಾವಿದ ಮಹೇಶ್, ಪೋಷಕ ಸಮಿತಿ ಸದಸ್ಯರಾದ ಶಿವರಾಜು, ಶೀಲಾ, ಮಹದೇವಮ್ಮ ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಭಾಗವಹಿಸಿದ್ದರು.