ಸಾರಾಂಶ
ಜಾನಪದ ಕಲೆಗಳಿಗೆ ಯುವಜನತೆಯ ಪ್ರೋತ್ಸಾಹ ಅಗತ್ಯ
ಕನ್ನಡಪ್ರಭ ವಾರ್ತೆ ರಾಮನಗರ
ಇಂದಿನ ಯುವಜನತೆ ನೆಲ ಮೂಲದ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವಂತಹ ಕಾರ್ಯ ಮಾಡಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಕರೆ ನೀಡಿದರು.ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಮಹಾಕಾವ್ಯ ಗಾಯನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಜಾನಪದ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ, ಬೆಳೆಸುವ ಕಾರ್ಯ ಆಗಬೇಕಿದೆ ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಕನ್ನಡದಲ್ಲಿ ಜಾನಪದ ಪರಂಪರೆಯಿತ್ತು ಎಂಬುದು ತಿಳಿದು ಬರುತ್ತದೆ ಎಂದರು.
ಜಾನಪದ ಗಾಯನವನ್ನು ಕೋಣನಕೊಪ್ಪಲು ಸಿದ್ದರಾಜು, ಕೈಲಾಸಮೂರ್ತಿ, ಮೋಹನ್ ಕುಮಾರ್ ಪ್ರಸ್ತುತ ಪಡಿಸಿದರು. ಕ್ಯುರೇಟರ್ ಎಂ. ರವಿ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ವಿದ್ವಾಂಸರಾದ ಶಿವಣ್ಣ, ಸಾಹಿತಿ ವಿಜಯ್ ರಾಂಪುರ, ಸು.ತ ರಾಮೇಗೌಡ, ಡಾ.ತೇಜಾವತಿ ಹಾಗೂ ಜಾನಪದ ಗಾಯಕರು ಉಪಸ್ಥಿತರಿದ್ದರು.